भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

NFC

ಎನ್‌ಎಫ್‌ಸಿ
Kannada Equivalent: (ರೂಪಿಸಬೇಕಿದೆ)
Short Description : ನಿಯರ್ ಫೀಲ್ಡ್ ಕಮ್ಯೂನಿಕೇಶನ್; ಪರಸ್ಪರ ಸಮೀಪವಿರುವ ಸಾಧನಗಳ ನಡುವೆ ನಿಸ್ತಂತು ಸಂವಹನವನ್ನು ಸಾಧ್ಯವಾಗಿಸುವ ತಂತ್ರಜ್ಞಾನ
Long Description: ಬಹುತೇಕ ಮೊಬೈಲ್ ಫೋನುಗಳಲ್ಲಿ, ಹಲವು ಕ್ರೆಡಿಟ್ ಕಾರ್ಡುಗಳಲ್ಲಿ ಎನ್‌ಎಫ್‌ಸಿ ಸೌಲಭ್ಯವಿರುವುದರ ಕುರಿತು ನಾವು ಕೇಳುತ್ತಿರುತ್ತೇವೆ. ಎನ್‌ಎಫ್‌ಸಿ ಎಂಬ ಈ ಹೆಸರು ‘ನಿಯರ್ ಫೀಲ್ಡ್ ಕಮ್ಯೂನಿಕೇಶನ್’ ಎನ್ನುವುದರ ಹ್ರಸ್ವರೂಪ. ಪರಸ್ಪರ ಸಮೀಪವಿರುವ ಸಾಧನಗಳ ನಡುವೆ ನಿಸ್ತಂತು ಸಂವಹನವನ್ನು (ವೈರ್‌ಲೆಸ್ ಕಮ್ಯೂನಿಕೇಶನ್) ಸಾಧ್ಯವಾಗಿಸುವ ತಂತ್ರಜ್ಞಾನ ಇದು.
ಮ್ಯಾಗ್ನೆಟಿಕ್ ಇಂಡಕ್ಷನ್ (ಕಾಂತ ಪ್ರೇರಣೆ) ಎಂಬ ವಿದ್ಯಮಾನವನ್ನು ಬಳಸಿಕೊಂಡು ಕೆಲಸಮಾಡುವ ಈ ತಂತ್ರಜ್ಞಾನ ಪರಸ್ಪರ ಹತ್ತಿರದಲ್ಲಿರುವ ಎರಡು ಸಾಧನಗಳ ನಡುವೆ ಮಾಹಿತಿ ವಿನಿಮಯವನ್ನು ಸಾಧ್ಯವಾಗಿಸುತ್ತದೆ. ಮಾಹಿತಿ ವಿನಿಮಯವಷ್ಟೇ ಏಕೆ, ನಿಸ್ತಂತು ಹಣಪಾವತಿಯಿಂದ ಜಾಹೀರಾತು ಪ್ರಸಾರದವರೆಗೆ ಹಲವು ಉದ್ದೇಶಗಳಿಗಾಗಿ ಎನ್‌ಎಫ್‌ಸಿ ಬಳಕೆ ಸಾಧ್ಯ. ಮೊಬೈಲಿನೊಡನೆ ಬ್ಲೂಟೂತ್ ಸಂಪರ್ಕ ಕಲ್ಪಿಸಿಕೊಳ್ಳಲು ಎನ್‌ಎಫ್‌ಸಿ ಬಳಸುವ ಸ್ಪೀಕರ್ – ಹೆಡ್‌ಫೋನ್ ಇತ್ಯಾದಿಗಳೂ ಇವೆ.
ಸೂಪರ್‌ಮಾರ್ಕೆಟಿನಲ್ಲಿ ಕೊಂಡ ವಸ್ತುಗಳಿಗೆ ಹಣ ಪಾವತಿಸಲು ಬಿಲ್ಲಿಂಗ್ ವಿಭಾಗದಲ್ಲಿರುವ ರೀಡರಿನ ಮುಂದೆ ಎನ್‌ಎಫ್‌ಸಿ ಕ್ರೆಡಿಟ್ ಕಾರ್ಡನ್ನೋ ಮೊಬೈಲ್ ಫೋನನ್ನೋ ಹಿಡಿದು ಮುಂದೆ ಸಾಗುವ ಕಲ್ಪನೆಯನ್ನು ಈ ತಂತ್ರಜ್ಞಾನ ಬಳಸಿ ಸಾಕಾರಗೊಳಿಸಬಹುದು. ಹಾಗೆ ಮಾಡಿದಾಗ ಎನ್‌ಎಫ್‌ಸಿ ಮೂಲಕ ವರ್ಗಾವಣೆಯಾಗುವ ಮಾಹಿತಿ ಬಳಸಿ ಬಿಲ್ಲಿನ ಹಣವನ್ನು ನಮ್ಮ ಖಾತೆಯಿಂದ ಅಂಗಡಿಯವರ ಖಾತೆಗೆ ವರ್ಗಾಯಿಸುವುದು ಸಾಧ್ಯವಾಗುತ್ತದೆ.

Netiquette

ನೆಟಿಕೆಟ್
Kannada Equivalent: (ರೂಪಿಸಬೇಕಿದೆ)
Short Description : ಅಂತರಜಾಲದ ಲೋಕದಲ್ಲಿ ಇತರರೊಡನೆ ಸಂವಹನ ನಡೆಸುವಾಗ ನಮ್ಮ ವರ್ತನೆ ಹೇಗಿರಬೇಕು ಎಂದು ತಿಳಿಸುವ ಶಿಷ್ಟಾಚಾರ
Long Description: ಶಾಲೆ, ಕಚೇರಿ, ಸಮಾರಂಭ, ಸಾರ್ವಜನಿಕ ಸ್ಥಳ ಮುಂತಾದ ಬೇರೆಬೇರೆ ಸಂದರ್ಭ-ಸ್ಥಳಗಳಲ್ಲಿ ನಮ್ಮ ವರ್ತನೆ ಹೀಗೆಯೇ ಇರಬೇಕು ಎಂದು ಸಮಾಜ ಅಪೇಕ್ಷಿಸುತ್ತದೆ. ಈ ಅಪೇಕ್ಷೆಗಳನ್ನು ನಿರ್ದೇಶಿಸುವುದು ಶಿಷ್ಟಾಚಾರ, ಅಂದರೆ ಎಟಿಕೆಟ್‌ನ ಕೆಲಸ.
ಜಾಲಲೋಕದಲ್ಲೂ ನಾವು ಪಾಲಿಸಬೇಕಾದ ಇಂತಹುದೇ ಶಿಷ್ಟಾಚಾರ ಇದೆ. ಇಮೇಲ್ ಹಾಗೂ ಮೊಬೈಲ್ ಸಂದೇಶಗಳನ್ನು ಕಳಿಸುವಾಗ, ಸಮಾಜಜಾಲಗಳಲ್ಲಿ ಇತರರೊಡನೆ ಸಂವಹನ ನಡೆಸುವಾಗ ನಮ್ಮ ವರ್ತನೆ ಹೇಗಿರಬೇಕು ಎಂದು ತಿಳಿಸುವ ಈ ಶಿಷ್ಟಾಚಾರವನ್ನು ‘ನೆಟಿಕೆಟ್’ ಎಂದು ಕರೆಯುತ್ತಾರೆ. ನೆಟ್ ಹಾಗೂ ಎಟಿಕೆಟ್ ಎಂಬ ಪದಗಳ ಜೋಡಣೆಯಿಂದ ಸೃಷ್ಟಿಯಾಗಿರುವ ಹೆಸರು ಇದು.
ಅನಗತ್ಯವಾಗಿ ಸಂದೇಶಗಳನ್ನು ಕಳಿಸುವುದು, ಇಮೇಲ್ ಸಂದೇಶಗಳಿಗೆ ಸುಖಾಸುಮ್ಮನೆ ‘ರಿಪ್ಲೈ ಆಲ್’ ಮಾಡುವುದು, ಸಿಕ್ಕಿದ್ದನ್ನೆಲ್ಲಾ ಫಾರ್‌ವರ್ಡ್ ಮಾಡುವುದು, ಬೇರೊಬ್ಬರ ಕುರಿತು ಇಲ್ಲಸಲ್ಲದ ಸುದ್ದಿ ಹಬ್ಬಿಸುವುದು, ನಮಗೆ ದೊರೆತ ಮಾಹಿತಿಯ ದುರ್ಬಳಕೆ ಮಾಡಿಕೊಳ್ಳುವುದು – ಇವೆಲ್ಲ ಸರಿಯಲ್ಲ ಎಂದು ನೆಟಿಕೆಟ್ ಹೇಳುತ್ತದೆ. ಹಾಗೆಯೇ ಜಾಲಲೋಕದ ಎಲ್ಲ ಬಳಕೆದಾರರೂ ಇತರರ ಖಾಸಗಿತನವನ್ನು ಗೌರವಿಸಬೇಕು ಎನ್ನುವುದು ನೆಟಿಕೆಟ್‌ನ ನಿರೀಕ್ಷೆ.
ಅಂದಹಾಗೆ ಈ ಶಿಷ್ಟಾಚಾರ ಎಲ್ಲೋ ಒಂದೆಡೆ ಬರೆದಿಟ್ಟ ನಿಯಮಗಳ ಪಟ್ಟಿಯೇನಲ್ಲ. ತಂತ್ರಜ್ಞಾನ ಬದಲಾದಂತೆ ಬಳಕೆದಾರರಿಂದ ಸಮುದಾಯ ನಿರೀಕ್ಷಿಸುವ ಅಂಶಗಳೂ ಬದಲಾಗುತ್ತ ಹೋಗುತ್ತವೆ. ಕಂಪ್ಯೂಟರಿನಲ್ಲಿ – ಮೊಬೈಲಿನಲ್ಲಿ ಕನ್ನಡ ಟೈಪ್ ಮಾಡುವ ಎಷ್ಟೆಲ್ಲ ಸೌಲಭ್ಯಗಳು ಈಗ ಲಭ್ಯವಿವೆಯಲ್ಲ, ನಮ್ಮ ಸಂವಹನಕ್ಕೆ ಕಂಗ್ಲಿಶ್ (ಇಂಗ್ಲಿಶ್ ಲಿಪಿಯಲ್ಲಿ ಬರೆದ ಕನ್ನಡ) ಬದಲು ಕನ್ನಡ ಲಿಪಿಯನ್ನೇ ಬಳಸುವುದು ಒಳ್ಳೆಯದು ಎಂಬ ಶಿಷ್ಟಾಚಾರವನ್ನು ನಾವೇ ಬೇಕಾದರೂ ರೂಪಿಸಿಕೊಳ್ಳಬಹುದು – ಪಾಲಿಸಬಹುದು!

Net Neutrality

ನೆಟ್ ನ್ಯೂಟ್ರಾಲಿಟಿ
Kannada Equivalent: (ರೂಪಿಸಬೇಕಿದೆ)
Short Description : ಅಂತರಜಾಲ – ವಿಶ್ವವ್ಯಾಪಿ ಜಾಲಗಳನ್ನು ಮುಕ್ತವಾಗಿ ಉಳಿಸಿಕೊಳ್ಳಬೇಕು, ಅಲ್ಲಿ ಯಾವುದೇ ರೀತಿಯ ಪಕ್ಷಪಾತಕ್ಕೆ ಅವಕಾಶವಿರದ ತಾಟಸ್ಥ್ಯ ಇರಬೇಕು ಎನ್ನುವುದನ್ನು ಪ್ರತಿಪಾದಿಸುವ ಪರಿಕಲ್ಪನೆ
Long Description: ವಿಶ್ವದೆಲ್ಲೆಡೆ ಕೋಟ್ಯಂತರ ಕಂಪ್ಯೂಟರುಗಳು, ಮೊಬೈಲ್ ದೂರವಾಣಿ ಮತ್ತಿತರ ಸಾಧನಗಳು ಇದೀಗ ಅಂತರಜಾಲದ ಸಂಪರ್ಕದಲ್ಲಿವೆ. ಇಷ್ಟು ಅಗಾಧ ಪ್ರಮಾಣದ ವ್ಯವಸ್ಥೆಯಾದ ಅಂತರಜಾಲಕ್ಕೆ ಯಾರೂ ಮಾಲೀಕರಿಲ್ಲ. ಅಂದರೆ, ಅಂತರಜಾಲದ ಆಗುಹೋಗುಗಳನ್ನು ಯಾರೂ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಂತ್ರಿಸುವಂತಿಲ್ಲ. ತಂತ್ರಾಂಶ ಅಭಿವರ್ಧನೆಯಲ್ಲಿ ದಶಕಗಳ ಅನುಭವವಿರುವ ಸಂಸ್ಥೆಯೇ ಆಗಲಿ, ನಿನ್ನೆಯಷ್ಟೇ ತಂತ್ರಜ್ಞಾನದ ಸಂಪರ್ಕಕ್ಕೆ ಬಂದ ವಿದ್ಯಾರ್ಥಿಯೇ ಆಗಿರಲಿ – ಇಲ್ಲಿ ಎಲ್ಲರಿಗೂ ಸಮಾನ ಅವಕಾಶ. ತಮ್ಮ ಉತ್ಪನ್ನಗಳನ್ನು ಜನರಿಗೆ ಪರಿಚಯಿಸಲು, ತಮ್ಮ ಆಲೋಚನೆಯನ್ನು ಕಾರ್ಯಗತಗೊಳಿಸಲು ಇಲ್ಲಿ ಎಲ್ಲರೂ ಸ್ವತಂತ್ರರು.
ಈ ಪೈಕಿ ಹೆಚ್ಚು ಸೌಲಭ್ಯವಿರುವ ಸಂಸ್ಥೆಗಳು – ಹಣಕಾಸಿನ ಶಕ್ತಿಯಿರುವ ದೊಡ್ಡ ಸಂಸ್ಥೆಗಳೇ ಆಗಲಿ, ಮೂಲಸೌಕರ್ಯದ ಮಾಲೀಕರಾದ ದೂರಸಂಪರ್ಕ ಸಂಸ್ಥೆಗಳೇ ಆಗಲಿ – ತಮ್ಮ ಸ್ಥಾನದ ಪ್ರಭಾವ ಬಳಸಿ ತಮಗೆ ಅಥವಾ ತಮ್ಮ ಗ್ರಾಹಕರಿಗೆ ಲಾಭಮಾಡಿಕೊಡಲು ಹೊರಟರೆ ಅದು ತಪ್ಪು. ನಿರ್ದಿಷ್ಟ ಮೊಬೈಲ್ ಸಂಪರ್ಕ ಬಳಸಿದರೆ ಇಂತಿಷ್ಟು ಜಾಲತಾಣಗಳನ್ನು ಉಚಿತವಾಗಿ ಬಳಸಬಹುದು ಎನ್ನುವಂತಹ ಯೋಜನೆಗಳ ವಿರುದ್ಧ ಪ್ರತಿಭಟನೆ ನಡೆಯುವುದಕ್ಕೆ ಇದೇ ಕಾರಣ.
ಅಂತರಜಾಲ – ವಿಶ್ವವ್ಯಾಪಿ ಜಾಲಗಳನ್ನು ರೂಪಿಸಿ ಬೆಳೆಸಿದ ಮಹನೀಯರ ಉದ್ದೇಶದಂತೆ ಅವು ಮುಕ್ತವಾಗಿಯೇ ಉಳಿಯಬೇಕು, ಯಾವುದೇ ಪಕ್ಷಪಾತ ತೋರದೆ ತಟಸ್ಥವಾಗುಳಿದು ಎಲ್ಲರಿಗೂ ಸಮಾನ ಅವಕಾಶ ಒದಗಿಸಬೇಕು, ಹೊಸಹೊಸ ಆವಿಷ್ಕಾರಗಳನ್ನು ಯಾರೇ ಮಾಡಿದರೂ ಪ್ರೋತ್ಸಾಹಿಸಬೇಕು ಎನ್ನುವುದು ನೆಟ್ ನ್ಯೂಟ್ರಾಲಿಟಿ ಪರಿಕಲ್ಪನೆಯ ಮೂಲಮಂತ್ರ (ನ್ಯೂಟ್ರಾಲಿಟಿ ಎಂದರೆ ತಾಟಸ್ಥ್ಯ ಎಂದರ್ಥ). ಈ ಪರಿಕಲ್ಪನೆಗೆ ಯಾರೂ ಧಕ್ಕೆತಾರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಜಾಗತಿಕ ಸ್ವಯಂಸೇವಾ ಸಂಸ್ಥೆಗಳೂ ಆಯಾ ದೇಶದ ಸರಕಾರಗಳೂ ವಹಿಸಿಕೊಂಡಿವೆ. ಜಾಲಲೋಕದ ಸಾಮಾನ್ಯ ಬಳಕೆದಾರರೂ ಕಾಲಕಾಲಕ್ಕೆ ಅವರನ್ನೆಲ್ಲ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

Network

ನೆಟ್‌ವರ್ಕ್
Kannada Equivalent: ಜಾಲ
Short Description : ಒಂದಕ್ಕಿಂತ ಹೆಚ್ಚು ಸಂಖ್ಯೆಯ ಕಂಪ್ಯೂಟರುಗಳ, ಪೂರಕ ಸಾಧನಗಳ ನಡುವೆ ಸಂಪರ್ಕ ಏರ್ಪಡಿಸಿ ಆ ಮೂಲಕ ಮಾಹಿತಿ ಹಾಗೂ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಅನುವುಮಾಡಿಕೊಡುವ ವ್ಯವಸ್ಥೆ
Long Description: ಒಂದಕ್ಕಿಂತ ಹೆಚ್ಚು ಸಂಖ್ಯೆಯ ಕಂಪ್ಯೂಟರುಗಳ ನಡುವೆ ಸಂಪರ್ಕ ಏರ್ಪಡಿಸಿ ಆ ಮೂಲಕ ಮಾಹಿತಿ ಹಾಗೂ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಅನುವುಮಾಡಿಕೊಡುವ ವ್ಯವಸ್ಥೆಯನ್ನು ಕಂಪ್ಯೂಟರ್ ನೆಟ್‌ವರ್ಕ್ (ಜಾಲ) ಎಂದು ಕರೆಯುತ್ತಾರೆ.
ಯಾವುದೇ ಜಾಲದಲ್ಲಿರುವ ಕಂಪ್ಯೂಟರುಗಳು ಒಂದೇ ಕೋಣೆಯಲ್ಲಿರಬಹುದು, ಪ್ರಪಂಚದ ವಿವಿಧ ಮೂಲೆಗಳಲ್ಲೂ ಇರಬಹುದು. ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಅವುಗಳ ಹೆಸರುಗಳು ಬದಲಾಗುತ್ತವೆ: ನಿರ್ದಿಷ್ಟ ಮಿತಿಯಲ್ಲಿ – ಒಂದು ಕಟ್ಟಡ ಅಥವಾ ಆವರಣದ ಒಳಗೆ – ಅಸ್ತಿತ್ವದಲ್ಲಿರುವ ಜಾಲಗಳಿಗೆ ಲೋಕಲ್ ಏರಿಯಾ ನೆಟ್‌ವರ್ಕ್ (ಲ್ಯಾನ್) ಎಂದು ಹೆಸರು; ಇನ್ನೂ ಹೆಚ್ಚಿನ ಭೌಗೋಳಿಕ ವ್ಯಾಪ್ತಿಯಿರುವ ಜಾಲ ವೈಡ್ ಏರಿಯಾ ನೆಟ್‌ವರ್ಕ್ (ವ್ಯಾನ್).
ಇಂತಹ ಅಸಂಖ್ಯ ಜಾಲಗಳು ಹಾಗೂ ವೈಯಕ್ತಿಕ ಕಂಪ್ಯೂಟರುಗಳ ಜೋಡಣೆಯಿಂದ ‘ಇಂಟರ್‌ನೆಟ್’ (ಅಂತರಜಾಲ) ರೂಪುಗೊಳ್ಳುತ್ತದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವವರಾದರೂ ಈ ಜಾಲದ ಸಂಪರ್ಕ ಪಡೆದುಕೊಳ್ಳುವುದು ಸಾಧ್ಯ.
ನಿರ್ದಿಷ್ಟ ಗುಂಪುಗಳ (ಉದಾ: ಒಂದು ಸಂಸ್ಥೆಯ ಉದ್ಯೋಗಿಗಳು, ನಿರ್ದಿಷ್ಟ ಸೇವೆಯ ಗ್ರಾಹಕರು, ಯಾವುದೋ ಸಂಘಟನೆಯ ಸದಸ್ಯರು ಇತ್ಯಾದಿ) ಬಳಕೆಗಾಗಿ ಮಾತ್ರವೇ ಮೀಸಲಿರುವ ಜಾಲಗಳೂ ಇವೆ. ಅವನ್ನು ‘ಇಂಟ್ರಾನೆಟ್’ಗಳೆಂದು ಕರೆಯುತ್ತಾರೆ.

Network Coverage

ನೆಟ್‌ವರ್ಕ್ ಕವರೇಜ್
Kannada Equivalent: (ರೂಪಿಸಬೇಕಿದೆ)
Short Description : ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿ
Long Description: ಮೊಬೈಲ್ ಜಾಲದ ಸಂಕೇತಗಳು (ಸಿಗ್ನಲ್) ಯಾವೆಲ್ಲ ಪ್ರದೇಶಗಳನ್ನು ತಲುಪಬಲ್ಲವು ಎನ್ನುವುದನ್ನು ಅದರ ಪ್ರಸಾರ ವ್ಯಾಪ್ತಿ, ಅಂದರೆ ನೆಟ್‌ವರ್ಕ್ ಕವರೇಜ್, ಸೂಚಿಸುತ್ತದೆ. ಪಕ್ಕದೂರಿನಲ್ಲಿರುವ ಮೊಬೈಲ್ ಟವರಿನ ಕವರೇಜ್ ನಮ್ಮ ಹಳ್ಳಿಯವರೆಗೆ ಮಾತ್ರ ಇದೆ ಎನ್ನುವುದಾದರೆ ನಮ್ಮೂರ ಪಕ್ಕದ ಇನ್ನೊಂದು ಹಳ್ಳಿಯಲ್ಲಿ ಮೊಬೈಲ್ ಬಳಸುವುದು ಸಾಧ್ಯವಾಗುವುದಿಲ್ಲ.
ಯಾವುದೇ ಮೊಬೈಲ್ ಜಾಲ ನಿರ್ದಿಷ್ಟ ಸಮಯದಲ್ಲಿ ಎಷ್ಟು ಕರೆಗಳನ್ನು, ಎಷ್ಟು ಪ್ರಮಾಣದ ದತ್ತಾಂಶ (ಡೇಟಾ) ವಿನಿಮಯವನ್ನು ನಿಭಾಯಿಸಬಲ್ಲದು ಎಂಬುದನ್ನು ಸೂಚಿಸುವುದು ಅದರ ಧಾರಣಶಕ್ತಿ (ನೆಟ್‌ವರ್ಕ್ ಕೆಪ್ಯಾಸಿಟಿ). ಇದು ಆ ಸ್ಥಳದಲ್ಲಿ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿ ಹೇಗಿದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ.
ನಾವಿರುವ ಪ್ರದೇಶ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿಯ ಅಂಚಿನಲ್ಲೋ, ಹೊರಗೋ ಇದ್ದರೆ ಕರೆಮಾಡಲು – ಅಂತರಜಾಲ ಸಂಪರ್ಕ ಬಳಸಲು ಕಷ್ಟವಾಗುತ್ತದೆ. ನಮ್ಮಲ್ಲಿ ಕವರೇಜ್ ಚೆನ್ನಾಗಿದ್ದರೂ ಮೊಬೈಲ್ ಬಳಸುತ್ತಿರುವವರ ಸಂಖ್ಯೆ ವಿಪರೀತ ಜಾಸ್ತಿಯಿದ್ದರೆ (ಕೆಪ್ಯಾಸಿಟಿ ಪೂರ್ಣವಾಗಿ ಬಳಕೆಯಾಗುತ್ತಿದ್ದರೆ) ಆಗಲೂ ಕರೆಮಾಡಲು – ಅಂತರಜಾಲ ಸಂಪರ್ಕ ಬಳಸಲು ಪರದಾಡುವ ಪರಿಸ್ಥಿತಿ ಬರುವ ಸಾಧ್ಯತೆಯಿದೆ.

Network Capacity

ನೆಟ್‌ವರ್ಕ್ ಕೆಪ್ಯಾಸಿಟಿ
Kannada Equivalent: (ರೂಪಿಸಬೇಕಿದೆ)
Short Description : ಮೊಬೈಲ್ ಜಾಲದ ಧಾರಣ ಶಕ್ತಿ
Long Description: ಮೊಬೈಲ್ ಜಾಲದ ಸಂಕೇತಗಳು (ಸಿಗ್ನಲ್) ಯಾವೆಲ್ಲ ಪ್ರದೇಶಗಳನ್ನು ತಲುಪಬಲ್ಲವು ಎನ್ನುವುದನ್ನು ಅದರ ಪ್ರಸಾರ ವ್ಯಾಪ್ತಿ, ಅಂದರೆ ನೆಟ್‌ವರ್ಕ್ ಕವರೇಜ್, ಸೂಚಿಸುತ್ತದೆ. ಪಕ್ಕದೂರಿನಲ್ಲಿರುವ ಮೊಬೈಲ್ ಟವರಿನ ಕವರೇಜ್ ನಮ್ಮ ಹಳ್ಳಿಯವರೆಗೆ ಮಾತ್ರ ಇದೆ ಎನ್ನುವುದಾದರೆ ನಮ್ಮೂರ ಪಕ್ಕದ ಇನ್ನೊಂದು ಹಳ್ಳಿಯಲ್ಲಿ ಮೊಬೈಲ್ ಬಳಸುವುದು ಸಾಧ್ಯವಾಗುವುದಿಲ್ಲ.
ಯಾವುದೇ ಮೊಬೈಲ್ ಜಾಲ ನಿರ್ದಿಷ್ಟ ಸಮಯದಲ್ಲಿ ಎಷ್ಟು ಕರೆಗಳನ್ನು, ಎಷ್ಟು ಪ್ರಮಾಣದ ದತ್ತಾಂಶ (ಡೇಟಾ) ವಿನಿಮಯವನ್ನು ನಿಭಾಯಿಸಬಲ್ಲದು ಎಂಬುದನ್ನು ಸೂಚಿಸುವುದು ಅದರ ಧಾರಣಶಕ್ತಿ (ನೆಟ್‌ವರ್ಕ್ ಕೆಪ್ಯಾಸಿಟಿ). ಇದು ಆ ಸ್ಥಳದಲ್ಲಿ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿ ಹೇಗಿದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ.
ನಾವಿರುವ ಪ್ರದೇಶ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿಯ ಅಂಚಿನಲ್ಲೋ, ಹೊರಗೋ ಇದ್ದರೆ ಕರೆಮಾಡಲು – ಅಂತರಜಾಲ ಸಂಪರ್ಕ ಬಳಸಲು ಕಷ್ಟವಾಗುತ್ತದೆ. ನಮ್ಮಲ್ಲಿ ಕವರೇಜ್ ಚೆನ್ನಾಗಿದ್ದರೂ ಮೊಬೈಲ್ ಬಳಸುತ್ತಿರುವವರ ಸಂಖ್ಯೆ ವಿಪರೀತ ಜಾಸ್ತಿಯಿದ್ದರೆ (ಕೆಪ್ಯಾಸಿಟಿ ಪೂರ್ಣವಾಗಿ ಬಳಕೆಯಾಗುತ್ತಿದ್ದರೆ) ಆಗಲೂ ಕರೆಮಾಡಲು – ಅಂತರಜಾಲ ಸಂಪರ್ಕ ಬಳಸಲು ಪರದಾಡುವ ಪರಿಸ್ಥಿತಿ ಬರುವ ಸಾಧ್ಯತೆಯಿದೆ.

Search Dictionaries

Loading Results

Follow Us :   
  Download Bharatavani App
  Bharatavani Windows App