भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Bandwidth

ಬ್ಯಾಂಡ್‌ವಿಡ್ತ್
Kannada Equivalent: (ರೂಪಿಸಬೇಕಿದೆ)
Short Description : ಯಾವುದೇ ಸಂಪರ್ಕ ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಪ್ರಮಾಣದ ದತ್ತಾಂಶದ ಹರಿವನ್ನು ನಿಭಾಯಿಸಬಲ್ಲದು ಎನ್ನುವುದರ ಮಾಪನ
Long Description: ಅಂತರಜಾಲ ಸಂಪರ್ಕದ ಬಗ್ಗೆ ಮಾತನಾಡುವಾಗ ಹಲವಾರು ಬಾರಿ ಬ್ಯಾಂಡ್‌ವಿಡ್ತ್ ಎನ್ನುವ ಹೆಸರಿನ ಪ್ರಸ್ತಾಪವನ್ನೂ ನಾವು ಕೇಳುತ್ತೇವೆ. ಯಾವುದೇ ಸಂಪರ್ಕ ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಪ್ರಮಾಣದ ದತ್ತಾಂಶದ ಹರಿವನ್ನು ನಿಭಾಯಿಸಬಲ್ಲದು ಎನ್ನುವುದನ್ನು ಇದು ಸೂಚಿಸುತ್ತದೆ. ನಿರ್ದಿಷ್ಟ ಗಾತ್ರದ ಕಡತವೊಂದನ್ನು ಡೌನ್‌ಲೋಡ್ ಮಾಡುತ್ತಿದ್ದೇವೆ ಎನ್ನುವುದಾದರೆ ಅದನ್ನು ಹೆಚ್ಚು ಬ್ಯಾಂಡ್‌ವಿಡ್ತ್ ಇರುವ ಸಂಪರ್ಕದಲ್ಲಿ ಹೆಚ್ಚು ವೇಗವಾಗಿ ಇಳಿಸಿಕೊಳ್ಳುವುದು ಸಾಧ್ಯ. ಕೊಳವೆಯ ವ್ಯಾಸ ದೊಡ್ಡದಾದಷ್ಟೂ ಅದರಲ್ಲಿ ಹೆಚ್ಚು ಪ್ರಮಾಣದ ನೀರು ಹರಿಸುವುದು ಸಾಧ್ಯವಾಗುತ್ತದಲ್ಲ, ಇದೂ ಹಾಗೆಯೇ.
ಒಂದು ಸೆಕೆಂಡಿಗೆ ಎಷ್ಟು ಬಿಟ್ ದತ್ತಾಂಶ ವರ್ಗಾವಣೆಯಾಗಬಲ್ಲದು ಎಂದು ಸೂಚಿಸುವ ಮೂಲಕ ಬ್ಯಾಂಡ್‌ವಿಡ್ತ್ ಅನ್ನು ಪ್ರತಿನಿಧಿಸುವುದು ಸಾಮಾನ್ಯ ಅಭ್ಯಾಸ. ಯಾವುದೋ ಸಂಪರ್ಕದ ಬ್ಯಾಂಡ್‌ವಿಡ್ತ್ ೮ ಎಂಬಿಪಿಎಸ್ ಎಂದರೆ ಆ ಸಂಪರ್ಕದ ಮೂಲಕ ಸೆಕೆಂಡಿಗೆ ೮೦ ಲಕ್ಷ ಬಿಟ್ (೮೦ ಮೆಗಾಬಿಟ್) ದತ್ತಾಂಶದ ವರ್ಗಾವಣೆ ಸಾಧ್ಯ ಎಂದರ್ಥ. ಇದರಲ್ಲಿ ನಾವು ಕಳುಹಿಸುವ ಹಾಗೂ ಪಡೆದುಕೊಳ್ಳುವ ಅಷ್ಟೂ ದತ್ತಾಂಶ (ಜಾಲತಾಣಗಳನ್ನು ನೋಡುವುದೂ ಸೇರಿದಂತೆ) ಸೇರಿರುತ್ತದೆ.
ಅಂತರಜಾಲ ಸಂಪರ್ಕದ ಬಳಕೆದಾರರಿಗೆ ಬ್ಯಾಂಡ್‌ವಿಡ್ತ್ ಒಂದು ನಿರ್ಬಂಧವಾದರೆ ಡೇಟಾ ಟ್ರಾನ್ಸ್‌ಫರ್ ಮಿತಿ ಇನ್ನೊಂದು ನಿರ್ಬಂಧ. ಎಂಬತ್ತು ಜಿಬಿವರೆಗೆ ೮ ಎಂಬಿಪಿಎಸ್ ಸಂಪರ್ಕ ಎಂದರೆ ಸೆಕೆಂಡಿಗೆ ಗರಿಷ್ಠ ೮೦ ಲಕ್ಷ ಬಿಟ್ ವೇಗದಲ್ಲಿ ಒಟ್ಟು ೮೦ ಗಿಗಾಬೈಟ್‌ನಷ್ಟು ಮಾಹಿತಿಯ ವರ್ಗಾವಣೆ ಸಾಧ್ಯ ಎಂದು ಅರ್ಥ. ಅಂತರಜಾಲ ಸಂಪರ್ಕಗಳಿಗಿರುವಂತೆ ಕೆಲವೊಮ್ಮೆ ಜಾಲತಾಣಗಳಿಗೂ ಇಂತಹ ಮಿತಿ ಇರುತ್ತದೆ. ಇಂತಿಷ್ಟು ಹೋಸ್ಟಿಂಗ್ ಶುಲ್ಕಕ್ಕೆ ಪ್ರತಿಯಾಗಿ ಆ ಜಾಲತಾಣ ತನ್ನ ಗ್ರಾಹಕರೊಡನೆ ಗರಿಷ್ಠ ಇಂತಿಷ್ಟೇ ಪ್ರಮಾಣದ ದತ್ತಾಂಶವನ್ನು ವರ್ಗಾಯಿಸಿಕೊಳ್ಳಬಹುದು ಎಂದು ಕೆಲ ಹೋಸ್ಟಿಂಗ್ ಸಂಸ್ಥೆಗಳು ನಿರ್ಬಂಧ ವಿಧಿಸಿರುತ್ತವೆ.

Backup

ಬ್ಯಾಕಪ್
Kannada Equivalent: (ರೂಪಿಸಬೇಕಿದೆ)
Short Description : ಅಗತ್ಯಬಿದ್ದಾಗ ಬಳಸಲು ಅನುವಾಗುವಂತೆ ನಮ್ಮ ಮಾಹಿತಿಯ ಇನ್ನೊಂದು ಪ್ರತಿಯನ್ನು ಉಳಿಸಿಟ್ಟುಕೊಳ್ಳುವ ಅಭ್ಯಾಸ
Long Description: ಈಚಿನ ವರ್ಷಗಳಲ್ಲಿ ನಮ್ಮ ಅದೆಷ್ಟೋ ಕೆಲಸಗಳಿಗಾಗಿ ನಾವು ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನಿನ ಮೇಲೆ ಅವಲಂಬಿತರಾಗಿದ್ದೇವೆ. ಹತ್ತಾರು ವಿಷಯಗಳಿಗೆ ಸಂಬಂಧಪಟ್ಟ ನೂರೆಂಟು ಬಗೆಯ ಮಾಹಿತಿಯನ್ನು, ರಾಶಿಗಟ್ಟಲೆ ಕಡತಗಳನ್ನು ನಾವು ಈ ಸಾಧನಗಳಲ್ಲಿ ಉಳಿಸಿಡುತ್ತೇವೆ. ಹಾಗೆ ಉಳಿಸಿಟ್ಟ ಮಾಹಿತಿಯನ್ನು ಬೇಕಾದಾಗೆಲ್ಲ ಬಳಸುತ್ತೇವೆ ಕೂಡ.
ಕಂಪ್ಯೂಟರು, ಸ್ಮಾರ್ಟ್‌ಫೋನುಗಳೆಲ್ಲ ಎಷ್ಟೇ ಆದರೂ ಭೌತಿಕ ವಸ್ತುಗಳು. ಅವು ಕಳೆದುಹೋಗುವುದು ಅಥವಾ ಕೆಟ್ಟುಹೋಗುವುದು ಅಸಾಧ್ಯವೇನಲ್ಲ. ಹಾಗೇನಾದರೂ ಆದಾಗ ಅವುಗಳಲ್ಲಿರುವ ನಮ್ಮ ಮಾಹಿತಿಯ ಗತಿ?
ಅನಿರೀಕ್ಷಿತ ಸಂದರ್ಭಗಳಲ್ಲಿ ನಮ್ಮ ಮಾಹಿತಿ ಕಳೆದುಹೋಗುವುದನ್ನು ತಪ್ಪಿಸಲು ಬಳಕೆಯಾಗುವ ತಂತ್ರವೇ ಬ್ಯಾಕಪ್. ಮತ್ತೊಮ್ಮೆ ಬೇಕಾಗಬಹುದಾದ ಮಾಹಿತಿಯನ್ನು ಆಗಿಂದಾಗ್ಗೆ ಪ್ರತಿಮಾಡಿಟ್ಟುಕೊಂಡು ಅಗತ್ಯಬಿದ್ದಾಗ ಬಳಸಲು ಅನುವುಮಾಡಿಕೊಡುವುದು ಈ ತಂತ್ರದ ಉದ್ದೇಶ.
ನಮ್ಮ ಮಾಹಿತಿಯನ್ನು ಬ್ಯಾಕಪ್ ಮಾಡಿಟ್ಟುಕೊಳ್ಳಲು ಹಲವು ವಿಧಾನಗಳನ್ನು ಬಳಸಬಹುದು. ಮುಖ್ಯವೆನಿಸುವ ಮಾಹಿತಿಯನ್ನು ವಾರಕ್ಕೋ ಹದಿನೈದು ದಿನಕ್ಕೋ ಒಮ್ಮೆ ನಾವೇ ಬೇರೊಂದು ಕಡೆ (ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್, ಪೆನ್ ಡ್ರೈವ್ ಇತ್ಯಾದಿಗಳಲ್ಲಿ) ಕಾಪಿ ಮಾಡಿಡುವುದು ಈ ಪೈಕಿ ಅತ್ಯಂತ ಸರಳವಾದದ್ದು. ಆದರೆ ಕಾಪಿಮಾಡಿಡಲು ಮರೆಯುವ ಸಾಧ್ಯತೆ ಇರುತ್ತದಲ್ಲ, ಅದನ್ನು ತಪ್ಪಿಸಲು ಬ್ಯಾಕಪ್ ತಂತ್ರಾಂಶಗಳನ್ನು ಬಳಸಬಹುದು. ಬೇರೊಂದು ಸಾಧನದಲ್ಲಿ ಕಾಪಿ ಮಾಡಿಟ್ಟ ಮಾಹಿತಿಯೂ ಹಾಳಾಗುವ ಸಾಧ್ಯತೆ ತಪ್ಪಿಸಲು ಗೂಗಲ್ ಡ್ರೈವ್, ಡ್ರಾಪ್ ಬಾಕ್ಸ್ ಮುಂತಾದ ಕ್ಲೌಡ್ ಆಧರಿತ ಸೇವೆಗಳನ್ನು ಬಳಸುವುದು ಸಾಧ್ಯ.
ಅಂದಹಾಗೆ ಬ್ಯಾಕಪ್ ಪರಿಕಲ್ಪನೆ ಕೇವಲ ಕಡತಗಳಿಗಷ್ಟೇ ಸೀಮಿತವೇನಲ್ಲ. ಸಮಾಜಜಾಲದಲ್ಲಿ ಹಂಚಿಕೊಂಡ ಮಾಹಿತಿ, ಬ್ಲಾಗ್‌ನಲ್ಲಿ ಬರೆದ ಲೇಖನಗಳು, ಇಮೇಲ್ ಸಂದೇಶಗಳನ್ನೂ ಬ್ಯಾಕಪ್ ಮಾಡಿಟ್ಟುಕೊಳ್ಳಬಹುದು.

Back end

ಬ್ಯಾಕ್ ಎಂಡ್
Kannada Equivalent: (ರೂಪಿಸಬೇಕಿದೆ)
Short Description : ಜಾಲತಾಣ ಅಥವಾ ತಂತ್ರಾಂಶದಲ್ಲಿ ಮೇಲ್ನೋಟಕ್ಕೆ ನಮ್ಮ ಗಮನಕ್ಕೆ ಬಾರದ, ಹಿನ್ನೆಲೆಯಲ್ಲಿ ನಡೆಯುವ ಸಂಗತಿಗಳನ್ನು ಸೂಚಿಸುವ ಹೆಸರು
Long Description: ಕಂಪ್ಯೂಟರ್ ಪ್ರಪಂಚದಲ್ಲಿ ನೂರೆಂಟು ಸಂಗತಿಗಳಿರುತ್ತವಲ್ಲ, ಅವೆಲ್ಲದರ ವಿವರಗಳನ್ನು ಕೇಳುತ್ತ ಹೋದರೆ ಇದೆಷ್ಟು ಕ್ಲಿಷ್ಟ ಎಂಬ ಭಾವನೆ ಬಾರದೆ ಇರದು. ಒಂದು ಜಾಲತಾಣದ ವಿಷಯವನ್ನೇ ತೆಗೆದುಕೊಂಡರೆ ಅದರ ಹಿನ್ನೆಲೆಯಲ್ಲಿ ಅದೆಷ್ಟೋ ಸಂಗತಿಗಳು (ಸರ್ವರ್, ಡೇಟಾಬೇಸ್ ಇತ್ಯಾದಿ) ಅಡಗಿರುತ್ತವೆ. ಅವೆಲ್ಲದರ ಪೈಕಿ ನಮ್ಮ ಗಮನಕ್ಕೆ ಬರುವುದು ಜಾಲತಾಣದ ವಿನ್ಯಾಸ, ಚಿತ್ರಗಳು, ಅದರಲ್ಲಿರುವ ಮಾಹಿತಿ – ಹೀಗೆ ಪರದೆಯ ಮೇಲೆ ಕಾಣುವುದೆಷ್ಟೋ ಅಷ್ಟೇ!
ಇದರ ಹಿನ್ನೆಲೆಯಲ್ಲಿ ಆಗುವ ಹಲವು ಕೆಲಸಗಳೆಲ್ಲವೂ ‘ಬ್ಯಾಕ್‌ಎಂಡ್’ ವ್ಯಾಪ್ತಿಯಲ್ಲಿ ಬರುತ್ತವೆ. ಜಾಲತಾಣದ ಸರ್ವರ್, ಕಚೇರಿ ಮಾಹಿತಿ ಸಂಗ್ರಹವಾಗಿರುವ ಡೇಟಾಬೇಸ್, ತಂತ್ರಾಂಶದಲ್ಲಿ ನಾವು ಯಾವುದೋ ಆಯ್ಕೆಯ ಮೇಲೆ ಕ್ಲಿಕ್ಕಿಸಿದಾಗ ನಿರ್ದಿಷ್ಟ ಕೆಲಸಗಳನ್ನು ಮಾಡುವ ಪ್ರೋಗ್ರಾಮುಗಳೆಲ್ಲ ಇರುವುದು ಈ ‘ಬ್ಯಾಕ್‌ಎಂಡ್’ನಲ್ಲಿಯೇ. ನಮ್ಮ ಮಾಹಿತಿಯನ್ನು ಸೂಕ್ತವಾಗಿ ನಿಭಾಯಿಸುವುದು, ಅದರ ಸುರಕ್ಷತೆಯ ಬಗ್ಗೆ ನಿಗಾವಹಿಸುವುದು, ಯಾವ ಬಳಕೆದಾರರಿಗೆ ಯಾವಾಗ ಏನು ಮಾಹಿತಿಯನ್ನು ನೀಡಬೇಕು ಎನ್ನುವುದನ್ನೆಲ್ಲ ತೀರ್ಮಾನಿಸುವುದು ಈ ವಿಭಾಗದ ಜವಾಬ್ದಾರಿ.

Batch Processing

ಬ್ಯಾಚ್ ಪ್ರಾಸೆಸಿಂಗ್
Kannada Equivalent: (ರೂಪಿಸಬೇಕಿದೆ)
Short Description : ನಿರ್ದಿಷ್ಟ ಅವಧಿಯ ವಹಿವಾಟುಗಳನ್ನೆಲ್ಲ ಉಳಿಸಿಟ್ಟುಕೊಂಡು ಆ ಅವಧಿಯ ಅಂತ್ಯದಲ್ಲಿ ಅಷ್ಟನ್ನೂ ಒಟ್ಟಿಗೆ ಸಂಸ್ಕರಿಸುವ ಪ್ರಕ್ರಿಯೆ
Long Description: ಕ್ರೆಡಿಟ್ ಕಾರ್ಡ್ ಅಥವಾ ಪೋಸ್ಟ್‌ಪೇಯ್ಡ್ ಮೊಬೈಲಿನ ಬಿಲ್ಲಿಂಗ್ ಪ್ರಕ್ರಿಯೆ ಒಂದು ಸರಳ ಸೂತ್ರವನ್ನು ಅವಲಂಬಿಸಿರುತ್ತದೆ. ಎರಡು ನಿರ್ದಿಷ್ಟ ದಿನಾಂಕಗಳ ನಡುವಿನ ನಮ್ಮ ಅಷ್ಟೂ ಬಳಕೆಗೆ ಅನ್ವಯಿಸುವಂತೆ ಒಂದೇ ಬಾರಿ ಶುಲ್ಕ ವಿಧಿಸುವುದೇ ಈ ಸೂತ್ರ.
ಐಟಿ ಕ್ಷೇತ್ರದ ದೃಷ್ಟಿಯಿಂದ ನೋಡುವುದಾದರೆ, ನಿರ್ದಿಷ್ಟ ಅವಧಿಯ ವಹಿವಾಟುಗಳನ್ನೆಲ್ಲ (ಉದಾ: ಮೊಬೈಲ್ ಕರೆ ಅಥವಾ ಕ್ರೆಡಿಟ್ ಕಾರ್ಡ್ ವ್ಯವಹಾರಗಳ ವಿವರ) ಉಳಿಸಿಟ್ಟುಕೊಂಡು ಆ ಅವಧಿಯ ಅಂತ್ಯದಲ್ಲಿ ಅಷ್ಟನ್ನೂ ಒಟ್ಟಿಗೆ ಸಂಸ್ಕರಿಸುವುದು ಈ ಪ್ರಕ್ರಿಯೆಯ ವೈಶಿಷ್ಟ್ಯ.
ಮಾಹಿತಿಯ ಸಣ್ಣ ತುಣುಕುಗಳ ಬದಲು ಅಂತಹ ತುಣುಕುಗಳ ತಂಡವನ್ನು (ಬ್ಯಾಚ್) ಸಂಸ್ಕರಿಸುವ ಈ ವಿಧಾನವನ್ನು ‘ಬ್ಯಾಚ್ ಪ್ರಾಸೆಸಿಂಗ್’ ಎಂದು ಕರೆಯುತ್ತಾರೆ. ಸಂಬಂಧಪಟ್ಟ ಪ್ರೋಗ್ರಾಮುಗಳನ್ನು ನಿರ್ದಿಷ್ಟ ಅವಧಿಗೊಮ್ಮೆ ಸ್ವಯಂಚಾಲಿತವಾಗಿ ಕಾರ್ಯಗತಗೊಳಿಸುವ ಮೂಲಕ ಇದನ್ನು ಸಾಧ್ಯವಾಗಿಸಲಾಗುತ್ತದೆ. ಇಂತಹ ಎರಡು ಬ್ಯಾಚ್‌ಗಳ ನಡುವಿನ ಅವಧಿ ಕೆಲ ಗಂಟೆಗಳಿಂದ ಪ್ರಾರಂಭಿಸಿ ಕೆಲ ತಿಂಗಳುಗಳವರೆಗೂ ಇರುವುದು ಸಾಧ್ಯ.
ಕೆಲಸದ ಅವಧಿಯಲ್ಲಿ ಸಂಗ್ರಹವಾಗುವ ಅಷ್ಟೂ ದತ್ತಾಂಶವನ್ನು ರಾತ್ರಿಯ ವೇಳೆ ಬ್ಯಾಚ್ ಪ್ರಾಸೆಸಿಂಗ್ ಮೂಲಕ ಸಂಸ್ಕರಿಸುವ ಅಭ್ಯಾಸ ದೊಡ್ಡದೊಡ್ಡ ಸಂಸ್ಥೆಗಳಲ್ಲಿ ಸಾಮಾನ್ಯ. ಮರುದಿನ ಕಚೇರಿ ಪ್ರಾರಂಭವಾಗುವ ವೇಳೆಗೆ ಅಗತ್ಯ ಮಾಹಿತಿಯೆಲ್ಲ ಸಿದ್ಧವಿರುವಂತೆ ನೋಡಿಕೊಳ್ಳುವುದು ಈ ಮೂಲಕ ಸಾಧ್ಯವಾಗುತ್ತದೆ. ಇಷ್ಟೆಲ್ಲ ಕಾಯುವಿಕೆ ಕಷ್ಟ ಎನ್ನುವ ಸಂಸ್ಥೆಗಳಲ್ಲಿ ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಬ್ಯಾಚ್ ಪ್ರಾಸೆಸಿಂಗ್ ನಡೆಯುವುದೂ ಉಂಟು.

Breadcrumbs

ಬ್ರೆಡ್‌ಕ್ರಂಬ್ಸ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರಿನಲ್ಲಿ ಸದ್ಯ ನಾವು ಯಾವ ಫೋಲ್ಡರಿನೊಳಗಿದ್ದೇವೆ, ಜಾಲತಾಣದ ಯಾವ ವಿಭಾಗವನ್ನು ವೀಕ್ಷಿಸುತ್ತಿದ್ದೇವೆ ಎನ್ನುವ ಬಗ್ಗೆ ಪ್ರದರ್ಶಿಸಲಾಗುವ ಮಾಹಿತಿ
Long Description: ಕಂಪ್ಯೂಟರಿನಲ್ಲಿ ಬೇರೆಬೇರೆ ಫೋಲ್ಡರುಗಳನ್ನು ನೋಡುತ್ತಿದ್ದಾಗ, ಬ್ಲಾಗು-ವೆಬ್‌ಸೈಟುಗಳನ್ನು ಜಾಲಾಡುವಾಗ ಪರದೆಯ ಮೇಲ್ಭಾಗದಲ್ಲಿ (ಸಾಮಾನ್ಯವಾಗಿ ಎಡತುದಿಯಲ್ಲಿ) ನಾವೆಲ್ಲಿದ್ದೇವೆ ಎನ್ನುವ ಬಗ್ಗೆ ಮಾಹಿತಿ ಕಾಣಿಸಿಕೊಳ್ಳುತ್ತದೆ. ಕಂಪ್ಯೂಟರಿನ ಕಡತಗಳ ಪೈಕಿ ಡೌನ್‌ಲೋಡ್ಸ್ ಎನ್ನುವ ಫೋಲ್ಡರಿನಲ್ಲಿರುವ ಇಜ್ಞಾನ ಎಂಬ ಇನ್ನೊಂದು ಫೋಲ್ಡರನ್ನು ‘ಡಾಕ್ಯುಮೆಂಟ್ಸ್ > ಡೌನ್‌ಲೋಡ್ಸ್ > ಇಜ್ಞಾನ’ ಎನ್ನುವ ಹಾದಿ ಸೂಚಿಸುತ್ತದೆ. ಅದೇ ರೀತಿ ಇಜ್ಞಾನ ಶಾಪಿಂಗ್ ಸಂಗಾತಿ ಜಾಲತಾಣದಲ್ಲಿ ಮೊಬೈಲ್ ಫೋನ್ ಬಗೆಗಿರುವ ಒಂದು ಲೇಖನ ನೋಡುವಾಗ ಆ ಲೇಖನದ ಮೇಲೆ ‘ಶಾಪಿಂಗ್ ಸಂಗಾತಿ > ಮೊಬೈಲ್ ಫೋನ್ > ಮೊಬೈಲ್ ಫೋನ್ ಕೊಳ್ಳುವ ಮುನ್ನ’ ಎಂಬ ಹಾದಿ ಕಾಣಸಿಗುತ್ತದೆ.
ಕಂಪ್ಯೂಟರಿನಲ್ಲಿ – ಜಾಲಲೋಕದಲ್ಲಿ ಇರುವ ಅಪಾರ ಮಾಹಿತಿಯ ನಡುವೆ ನಾವು ಕಳೆದುಹೋಗುವುದು ಸುಲಭ. ಸದ್ಯ ನಾವೆಲ್ಲಿದ್ದೇವೆ ಎಂಬುದನ್ನು ತೋರಿಸುವುದು ಈ ಗೊಂಡಾರಣ್ಯದಲ್ಲಿ ನಾವು ದಾರಿತಪ್ಪದಂತೆ ನೋಡಿಕೊಳ್ಳುವ ಉದ್ದೇಶದಿಂದಲೇ.
ಪುಟ್ಟ ಮಕ್ಕಳಿಬ್ಬರು ಅರಣ್ಯಕ್ಕೆ ಹೋದಾಗ ಬಂದ ಹಾದಿ ನೆನಪಿರಲೆಂದು ದಾರಿಯುದ್ದಕ್ಕೂ ಬ್ರೆಡ್ ತುಣುಕುಗಳನ್ನು ಉದುರಿಸುತ್ತ ಹೋಗುವ ಪ್ರಸಂಗ ಗ್ರಿಮ್ ಸಹೋದರರ ಕಿನ್ನರ ಕತೆಯೊಂದರಲ್ಲಿ ಬರುತ್ತದೆ. ಈ ಪ್ರಸಂಗದಿಂದ ಸ್ಫೂರ್ತಿಪಡೆದು ಮಾಹಿತಿಯ ಅರಣ್ಯದಲ್ಲಿ ನಮ್ಮ ಸ್ಥಾನವನ್ನು ಗುರುತಿಸುವ ಹಂತಹಂತದ ಹಾದಿಯನ್ನೂ ಬ್ರೆಡ್ ತುಣುಕುಗಳು – ‘ಬ್ರೆಡ್‌ಕ್ರಂಬ್ಸ್’ – ಎಂದೇ ಕರೆಯಲಾಗುತ್ತದೆ.

Browser

ಬ್ರೌಸರ್
Kannada Equivalent: (ರೂಪಿಸಬೇಕಿದೆ)
Short Description : ವಿಶ್ವವ್ಯಾಪಿ ಜಾಲದಲ್ಲಿರುವ ಜಾಲತಾಣಗಳನ್ನು ಕಂಪ್ಯೂಟರಿನಲ್ಲಿ ವೀಕ್ಷಿಸಲು ಬಳಕೆಯಾಗುವ ತಂತ್ರಾಂಶ
Long Description: ವಿಶ್ವವ್ಯಾಪಿ ಜಾಲದ ಜಾಲತಾಣಗಳಲ್ಲಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರಿಗೆ ಬರಮಾಡಿಕೊಳ್ಳಲು ಬ್ರೌಸರ್ ತಂತ್ರಾಂಶ ಅತ್ಯಗತ್ಯ. ಲ್ಯಾಪ್‌ಟಾಪ್-ಡೆಸ್ಕ್‌ಟಾಪ್‌ಗಳಿಗಷ್ಟೆ ಅಲ್ಲ, ಟ್ಯಾಬ್ಲೆಟ್ಟು-ಮೊಬೈಲುಗಳಲ್ಲೂ ಬ್ರೌಸರ್ ತಂತ್ರಾಂಶ ಬೇಕು.
ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಒಪೆರಾ ಮೊದಲಾದವು ಬ್ರೌಸರ್‌ಗೆ ಉದಾಹರಣೆಗಳು. ಈ ಪೈಕಿ ಹಲವು ಬ್ರೌಸರುಗಳ ಕನ್ನಡ ಆವೃತ್ತಿ ಕೂಡ ಇದೆ.
ವಿಶ್ವದ ಮೂಲೆಮೂಲೆಗಳಲ್ಲಿರುವ ಕಂಪ್ಯೂಟರುಗಳಲ್ಲಿ ಶೇಖರವಾಗಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರ್ ಅಥವಾ ಮೊಬೈಲಿನಲ್ಲಿ ವೀಕ್ಷಿಸಲು ಈ ತಂತ್ರಾಂಶಗಳು ಅನುವುಮಾಡಿಕೊಡುತ್ತವೆ. ನಾವು ನೋಡುತ್ತಿರುವ ಜಾಲತಾಣ ಕನ್ನಡದ್ದಾಗಿರಲಿ, ಇಂಗ್ಲಿಷಿನದ್ದಾಗಿರಲಿ ಅಥವಾ ರಷ್ಯನ್ ಭಾಷೆಯದೇ ಇರಲಿ – ತಾಂತ್ರಿಕ ಹೊಂದಾಣಿಕೆಗಳೆಲ್ಲ ಸರಿಯಾಗಿದ್ದ ಪಕ್ಷದಲ್ಲಿ ಅಲ್ಲಿರುವ ಮಾಹಿತಿಯನ್ನು ನಮ್ಮೆದುರು ಪ್ರದರ್ಶಿಸುವುದು ಬ್ರೌಸರ್‌ನ ಕೆಲಸ.
ಹೀಗೆ ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನೋಡುವುದು ಮಾತ್ರವಲ್ಲ; ಆ ಮಾಹಿತಿಯನ್ನು ಉಳಿಸಿಕೊಳ್ಳುವುದು, ಮುದ್ರಿಸಿಕೊಳ್ಳುವುದು, ವಿವಿಧ ಪುಟಗಳ ನಡುವೆ ಹಿಂದೆಮುಂದೆ ಓಡಾಡುವುದು, ಅಚ್ಚುಮೆಚ್ಚಿನ ಪುಟಗಳ ವಿಳಾಸ ಸಂಗ್ರಹಿಸಿಟ್ಟುಕೊಳ್ಳುವುದು ಮುಂತಾದ ಇನ್ನಿತರ ಸೌಲಭ್ಯಗಳೂ ಬ್ರೌಸರ್ ತಂತ್ರಾಂಶದಲ್ಲಿರುತ್ತವೆ.

Blog

ಬ್ಲಾಗ್
Kannada Equivalent: (ರೂಪಿಸಬೇಕಿದೆ)
Short Description : ವಿಶ್ವವ್ಯಾಪಿ ಜಾಲದ ಮೂಲಕ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಇರುವ ಪ್ರಭಾವಶಾಲಿ ಮಾಧ್ಯಮ
Long Description: ಬ್ಲಾಗ್ ಎಂಬ ಹೆಸರು ವೆಬ್ ಲಾಗ್ ಎಂಬುದರ ಅಪಭ್ರಂಶ. ಇದು ಯಾರು ಬೇಕಾದರೂ ಸುಲಭವಾಗಿ ಪಡೆದುಕೊಳ್ಳಬಹುದಾದ ಜಾಲತಾಣ. ಓದಿದ ಪುಸ್ತಕ, ಇಷ್ಟವಾದ ತಿಂಡಿ, ಇಷ್ಟವಾಗದ ಚಲನಚಿತ್ರಗಳಿಂದ ಪ್ರಾರಂಭಿಸಿ ನಮ್ಮ ಹವ್ಯಾಸಗಳು, ಬರವಣಿಗೆ, ಅಭಿಪ್ರಾಯಗಳು – ಹೀಗೆ ಮನಸ್ಸಿಗೆ ಬಂದ ಯಾವುದೇ ವಿಷಯವನ್ನು ಇಡೀ ಜಗತ್ತಿನೊಡನೆ ಹಂಚಿಕೊಳ್ಳಲು ಬ್ಲಾಗುಗಳು ಅನುವುಮಾಡಿಕೊಡುತ್ತವೆ. ಬ್ಲಾಗನ್ನು ಜಾಲತಾಣ ಅನ್ನುವುದಕ್ಕಿಂತ ಅಂತರಜಾಲದಲ್ಲಿರುವ ದಿನಚರಿ ಎನ್ನುವುದೇ ಹೆಚ್ಚು ಸೂಕ್ತ.
ಹೊಸತೊಂದು ಬ್ಲಾಗನ್ನು ಸೃಷ್ಟಿಸಿಕೊಳ್ಳುವುದು ನಮಗೊಂದು ಇಮೇಲ್ ವಿಳಾಸ ಪಡೆದುಕೊಂಡಷ್ಟೇ ಸುಲಭ! ಹೊಸದಾಗಿ ಕಂಪ್ಯೂಟರ್ ಬಳಸಲು ಕಲಿತವರೂ ಕೂಡ ಬಹಳ ಸುಲಭವಾಗಿ ಬ್ಲಾಗಮಂಡಲದ ಪ್ರಜೆಯಾಗಬಹುದು. ಬ್ಲಾಗಿಂಗ್ ಸೇವೆ ಒದಗಿಸುವ ಯಾವುದೇ ತಾಣಕ್ಕೆ (ಬ್ಲಾಗರ್, ವರ್ಡ್‌ಪ್ರೆಸ್ ಇತ್ಯಾದಿ) ಹೋಗಿ ಅವರು ಕೇಳುವ ಒಂದಷ್ಟು ಮಾಹಿತಿ ಕೊಟ್ಟು ನೋಂದಾಯಿಸಿಕೊಂಡರೆ ಸಾಕು, ನಮ್ಮದೇ ಆದ ಬ್ಲಾಗು ಸಿದ್ಧವಾಗುತ್ತದೆ; ಅದರಲ್ಲಿ ನಮಗೆ ಬೇಕಾದ ಯಾವುದೇ ಬಗೆಯ ಮಾಹಿತಿ (ಪಠ್ಯ, ಚಿತ್ರ, ವೀಡಿಯೋ, ಇತರ ತಾಣಗಳ ಲಿಂಕ್ ಇತ್ಯಾದಿ) ಸೇರಿಸುವುದು ಸಾಧ್ಯವಾಗುತ್ತದೆ.

Bluetooth

ಬ್ಲೂಟೂತ್
Kannada Equivalent: (ರೂಪಿಸಬೇಕಿದೆ)
Short Description : ಪರಸ್ಪರ ಸಮೀಪದಲ್ಲಿರುವ ವಿದ್ಯುನ್ಮಾನ ಸಾಧನಗಳ ನಡುವೆ ನಿಸ್ತಂತು (ವೈರ್‌ಲೆಸ್) ಸಂವಹನ ಹಾಗೂ ಕಡತಗಳ ವಿನಿಮಯವನ್ನು ಸಾಧ್ಯವಾಗಿಸುವ ತಂತ್ರಜ್ಞಾನ
Long Description: ವಿಚಿತ್ರ ಹೆಸರಿನಿಂದ ಗಮನಸೆಳೆಯುವ ತಂತ್ರಜ್ಞಾನಗಳ ಪೈಕಿ ‘ಬ್ಲೂಟೂತ್’ಗೆ ವಿಶೇಷ ಸ್ಥಾನವಿದೆ. ಪರಸ್ಪರ ಸಮೀಪದಲ್ಲಿರುವ ವಿದ್ಯುನ್ಮಾನ ಸಾಧನಗಳ ನಡುವೆ ನಿಸ್ತಂತು (ವೈರ್‌ಲೆಸ್) ಸಂವಹನ ಹಾಗೂ ಕಡತಗಳ ವಿನಿಮಯವನ್ನು ಸಾಧ್ಯವಾಗಿಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯ.
ಮೊದಲಿಗೆ ಮೊಬೈಲ್ ಫೋನುಗಳ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಬ್ಲೂಟೂತ್ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ಈಚೆಗೆ ವೈ-ಫಿ ತಂತ್ರಜ್ಞಾನ ಆಧರಿತ ‘ಶೇರ್‌ಇಟ್’ನಂತಹ ಸೌಲಭ್ಯಗಳು ಬಂದಮೇಲೆ ಆ ಬಗೆಯ ಬಳಕೆ ಕೊಂಚ ಕಡಿಮೆಯಾಗಿದೆ. ಆದರೆ ನಿಸ್ತಂತು ಇಯರ್‌ಫೋನ್ ಹಾಗೂ ಸ್ಪೀಕರುಗಳಲ್ಲಿ, ಕಾರಿನ ಮನರಂಜನಾ ವ್ಯವಸ್ಥೆಯಲ್ಲೆಲ್ಲ ಬ್ಲೂಟೂತ್ ಆಧಿಪತ್ಯ ಇನ್ನೂ ಮುಂದುವರೆದಿದೆ. ಕಾರಿನಲ್ಲಿರುವ ಸ್ಪೀಕರ್ ಹಾಗೂ ಮೈಕ್ ಮೂಲಕ ಮೊಬೈಲ್ ಫೋನ್ ಬಳಸುತ್ತೇವಲ್ಲ, ಅಲ್ಲಿ ಬಳಕೆಯಾಗುವುದು ಇದೇ ತಂತ್ರಜ್ಞಾನ. ಬೆಂಗಳೂರಿನ ಸಂಚಾರಿ ಪೊಲೀಸರು ರಸ್ತೆಯಲ್ಲಿ ದಂಡ ಕಟ್ಟಿಸಿಕೊಂಡು ರಸೀತಿ ಮುದ್ರಿಸಿಕೊಡುವುದು ಬ್ಲೂಟೂತ್ ಸಂಪರ್ಕವಿರುವ ಪ್ರಿಂಟರಿನಲ್ಲೇ!
ಅಂದಹಾಗೆ ಪುರಾತನ ಯುರೋಪಿನ ಭಾಗವೊಂದನ್ನು ಆಳುತ್ತಿದ್ದ ಹರಾಲ್ಡ್ ಬ್ಲಾಟಂಡ್ (Harald Blåtand) ಎಂಬಾತನ ಹೆಸರಿನ ಉತ್ತರಾರ್ಧದ ಇಂಗ್ಲಿಷ್ ಅನುವಾದ ಈ ಹೆಸರಿಗೆ ಸ್ಫೂರ್ತಿ. ತನ್ನ ಪರಿಣಾಮಕಾರಿ ಸಂವಹನ ಶೈಲಿಯಿಂದ (ಇಂದಿನ) ಡೆನ್ಮಾರ್ಕ್ ಹಾಗೂ ನಾರ್ವೆ ಪ್ರದೇಶಗಳನ್ನು ಒಗ್ಗೂಡಿಸಿದ್ದನಂತೆ. ಬ್ಲೂಟೂತ್ ತಂತ್ರಜ್ಞಾನವೂ ಇಷ್ಟೇ ಪರಿಣಾಮಕಾರಿ ಎನ್ನುವುದು ಅದಕ್ಕೆ ಹೆಸರಿಟ್ಟವರ ಅಭಿಪ್ರಾಯವಾಗಿದ್ದಿರಬಹುದು. ಈ ರಾಜನ ಒಂದು ಹಲ್ಲು ನೀಲಿಯಾಗಿ ಕಾಣುತ್ತಿತ್ತು, ಹಾಗಾಗಿ ಅವನನ್ನು ಹರಾಲ್ಡ್ ಬ್ಲೂಟೂತ್ ಎಂದು ಕರೆಯುತ್ತಿದ್ದರು ಎನ್ನುವುದು ಪ್ರಚಲಿತದಲ್ಲಿರುವ ಇನ್ನೊಂದು ಆವೃತ್ತಿ.

Bluray Disk

ಬ್ಲೂರೇ ಡಿಸ್ಕ್
Kannada Equivalent: (ರೂಪಿಸಬೇಕಿದೆ)
Short Description : ಸಾಮಾನ್ಯ ಡಿವಿಡಿಗಳಿಗಿಂತ ಹೆಚ್ಚು ಪ್ರಮಾಣದ ಮಾಹಿತಿಯನ್ನು ಶೇಖರಿಸಿಟ್ಟುಕೊಳ್ಳಬಲ್ಲ ಮಾಧ್ಯಮ
Long Description: ಒಂದು ಕಾಲದಲ್ಲಿ ಮನೆಯಲ್ಲಿ ಸಿನಿಮಾ ನೋಡಬೇಕೆನಿಸಿದಾಗ ವೀಡಿಯೋ ಕ್ಯಾಸೆಟ್ಟನ್ನು – ಪ್ಲೇಯರನ್ನು ಬಾಡಿಗೆಗೆ ತರುವ ಅಭ್ಯಾಸವಿತ್ತು. ನಂತರ ವಿಸಿಡಿ – ಡಿವಿಡಿಗಳು ಬಂದವು. ಬಾಡಿಗೆಗೆ ತರುವ ಅಭ್ಯಾಸದ ಜೊತೆಗೆ ಅವನ್ನು ಕೊಂಡಿಟ್ಟುಕೊಳ್ಳುವ ಅಭ್ಯಾಸವೂ ಶುರುವಾಯಿತು. ಮುಂದೆ ಅಂತರಜಾಲ ಸಂಪರ್ಕದ ವೇಗ ಹೆಚ್ಚಿದಂತೆ, ಸಿನಿಮಾಗಳನ್ನು ಡೌನ್‌ಲೋಡ್ ಮಾಡುವುದು – ಜಾಲತಾಣಗಳಲ್ಲೇ ನೋಡುವುದು ಸಾಧ್ಯವಾದಂತೆ ಇವೆಲ್ಲ ಅಭ್ಯಾಸಗಳು ಕಡಿಮೆಯೂ ಆದವು.
ಆದರೆ ಇಂತಹ ಪರಿಸ್ಥಿತಿಯಲ್ಲೂ ಆನ್‌ಲೈನ್ ಅಂಗಡಿಗಳಲ್ಲಿ ಸಿನಿಮಾ ಮುದ್ರಿಕೆಗಳು ಮಾರಾಟವಾಗುತ್ತಿವೆ. ವಿಸಿಡಿ – ಡಿವಿಡಿಗಳಿಗೆ ಹತ್ತಿಪ್ಪತ್ತು ರೂಪಾಯಿಗಳಿಂದ ನೂರಿನ್ನೂರು ರೂಪಾಯಿಗಳವರೆಗಿನ ಬೆಲೆ ಇರುವುದೇನೋ ಸರಿ, ಅದಕ್ಕೂ ಹೆಚ್ಚು – ಕೆಲವೊಮ್ಮೆ ಸಾವಿರ ರೂಪಾಯಿಯನ್ನೂ ಮೀರಿದ – ಬೆಲೆಗೂ ಕೆಲ ಸಿನಿಮಾ ಮುದ್ರಿಕೆಗಳು ಮಾರಾಟವಾಗುತ್ತವೆ! ವಿಸಿಡಿ – ಡಿವಿಡಿಗಳೆರಡೂ ಅಲ್ಲದ ಈ ಮಾಧ್ಯಮವೇ ಬ್ಲೂ-ರೇ ಡಿಸ್ಕ್.
ಹೆಚ್ಚು ಸ್ಪಷ್ಟವಾದ, ಹಾಗಾಗಿಯೇ ಶೇಖರಣೆಗೆ ಹೆಚ್ಚು ಸ್ಥಳ ಬೇಡುವ ವೀಡಿಯೋಗಳನ್ನು ಶೇಖರಿಸಿಡಲು ಸೋನಿ ಸಂಸ್ಥೆ ರೂಪಿಸಿದ ತಂತ್ರಜ್ಞಾನದ ಫಲವೇ ಬ್ಲೂ-ರೇ ಡಿಸ್ಕ್‌ಗಳ ಸೃಷ್ಟಿ. ಇವುಗಳಲ್ಲಿ ಸಾಮಾನ್ಯ ಡಿವಿಡಿಗಳಿಗಿಂತ ಐದಾರು ಪಟ್ಟು ಹೆಚ್ಚು ಪ್ರಮಾಣದ ಮಾಹಿತಿಯನ್ನು ಶೇಖರಿಸುವುದು ಸಾಧ್ಯ. ವಿಸಿಡಿ, ಡಿವಿಡಿಗಳಲ್ಲಿರುವ ಮಾಹಿತಿಯನ್ನು ಓದಲು ಕೆಂಪು ಲೇಸರ್ ಕಿರಣ ಬಳಕೆಯಾದಂತೆ ಬ್ಲ್ಯೂ-ರೇ ಡಿಸ್ಕುಗಳಲ್ಲಿ ನೀಲಿ ಲೇಸರ್ ಕಿರಣಗಳನ್ನು ಬಳಸಲಾಗುತ್ತದೆ; ಇದರಿಂದಾಗಿ ಡಿಸ್ಕ್ ಮೇಲ್ಮೈಯಲ್ಲಿ ಕಡಿಮೆ ಸ್ಥಳ ಬಳಸಿಕೊಂಡು ಹೆಚ್ಚು ಮಾಹಿತಿಯನ್ನು ಶೇಖರಿಸುವುದು ಹಾಗೂ ಅದನ್ನು ಮತ್ತೆ ಸುಲಭವಾಗಿ ಓದುವುದು ಸಾಧ್ಯವಾಗುತ್ತದೆ. ಅವುಗಳ ನಾಮಕಾರಣವೂ ಈ ನೀಲಿ ಕಿರಣಗಳೇ!

Bloatware

ಬ್ಲೋಟ್‌ವೇರ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರಿನಲ್ಲಿ – ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿರುವ ಅನಗತ್ಯ ತಂತ್ರಾಂಶ
Long Description: ಕಂಪ್ಯೂಟರಿನಲ್ಲಿ, ಸ್ಮಾರ್ಟ್‌ಫೋನಿನಲ್ಲಿ ನಾವು ಬೇರೆಬೇರೆ ರೀತಿಯ ತಂತ್ರಾಂಶಗಳನ್ನು ಬಳಸುತ್ತೇವೆ. ಕಚೇರಿ ವ್ಯವಹಾರದಿಂದ ಮನರಂಜನೆಯವರೆಗೆ ಈ ತಂತ್ರಾಂಶಗಳು ನಮಗೆ ಹಲವು ಕೆಲಸಗಳಲ್ಲಿ ನೆರವಾಗುತ್ತವೆ.
ಆದರೆ ಎಲ್ಲ ತಂತ್ರಾಂಶಗಳೂ ಸಂಪೂರ್ಣವಾಗಿ ಉಪಯುಕ್ತವಾಗಿರಬೇಕು ಎಂದೇನೂ ಇಲ್ಲ. ಕುತಂತ್ರಾಂಶಗಳಂತೆ (ಮಾಲ್‌ವೇರ್) ಹಾನಿಕರವಲ್ಲದ, ಆದರೆ ಸಂಪೂರ್ಣವಾಗಿ ಉಪಯುಕ್ತವೂ ಅಲ್ಲದ ಅನೇಕ ತಂತ್ರಾಂಶಗಳನ್ನು ನಾವು ನೋಡಬಹುದು. ಶೇಖರಣಾ ಸಾಮರ್ಥ್ಯ – ರ್‍ಯಾಮ್ ಇತ್ಯಾದಿಗಳನ್ನು ಹೆಚ್ಚು ಪ್ರಮಾಣದಲ್ಲಿ ಬಳಸುವುದು, ಯಾವುದೇ ಪ್ರಯೋಜನವಿಲ್ಲದ ಅಥವಾ ತೋರಿಕೆಯ ಸೌಲಭ್ಯಗಳನ್ನು ಒದಗಿಸುವುದು ಇಂತಹ ತಂತ್ರಾಂಶಗಳ ಗುಣಲಕ್ಷಣ.
ಕೊಬ್ಬಿನ ಅಂಶ ಹೆಚ್ಚಾದಾಗ ಸ್ಥೂಲಕಾಯ ಬಂದು ಚಟುವಟಿಕೆ ಕಡಿಮೆಯಾಗುತ್ತದಲ್ಲ, ಇಂತಹ ಅನಗತ್ಯ ತಂತ್ರಾಂಶಗಳಿಂದ ಕಂಪ್ಯೂಟರಿನ – ಸ್ಮಾರ್ಟ್‌ಫೋನಿನ ಚಟುವಟಿಕೆಗೂ ತೊಂದರೆಯಾಗುತ್ತದೆ. ಹಾಗಾಗಿಯೇ ಇಂತಹ ತಂತ್ರಾಂಶಗಳನ್ನು ‘ಬ್ಲೋಟ್‌ವೇರ್’ ಎಂದು ಕರೆಯುತ್ತಾರೆ (ಬ್ಲೋಟ್ = ಊದಿಕೊಳ್ಳು).
ಬಹಳಷ್ಟು ಸಾರಿ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ನಿರ್ಮಾತೃಗಳು ತಮ್ಮ ಉತ್ಪನ್ನಗಳಲ್ಲಿ ಇಂತಹ ತಂತ್ರಾಂಶಗಳನ್ನು ಸೇರಿಸಿರುತ್ತಾರೆ. ಯಂತ್ರಾಂಶದ ಜೊತೆಗೆ ಬಳಕೆದಾರರು ನಮ್ಮದೇ ತಂತ್ರಾಂಶಗಳನ್ನೂ ಬಳಸಲಿ ಎನ್ನುವ ಉದ್ದೇಶವಷ್ಟೇ ಇದರ ಹಿನ್ನೆಲೆಯಲ್ಲಿರುತ್ತದೆ; ಆದರೆ ಆ ತಂತ್ರಾಂಶಗಳು ಉಪಯುಕ್ತವಾಗಿವೆಯೆಂದು ಬಳಕೆದಾರರಿಗೆ ಅನ್ನಿಸದಿದ್ದಾಗ ಅವು ಬ್ಲೋಟ್‌ವೇರ್ ಎಂದು ಕರೆಸಿಕೊಳ್ಳುತ್ತವೆ. ತೀರಾ ಈಚಿನವರೆಗೂ ನಿರ್ಮಾತೃಗಳು ಸೇರಿಸಿದ ಇಂತಹ ತಂತ್ರಾಂಶಗಳನ್ನು ತೆಗೆದುಹಾಕುವ ಸ್ವಾತಂತ್ರ್ಯ ಬಳಕೆದಾರರಿಗೆ ಇರಲಿಲ್ಲ. ಬ್ಲೋಟ್‌ವೇರ್ ಕುರಿತ ಆಕ್ರೋಶ ಹೆಚ್ಚಿದಂತೆ ಕೆಲ ಸಂಸ್ಥೆಗಳು ಈಚೆಗೆ ಈ ಸ್ವಾತಂತ್ರ್ಯವನ್ನೂ ನೀಡಲು ಪ್ರಾರಂಭಿಸಿದ್ದಾರೆ.
ಯಾವುದೋ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಲು ಹೊರಟಾಗ ಜೊತೆಯಲ್ಲಿ ಬೇರೆಯ ಕೆಲ ತಂತ್ರಾಂಶಗಳನ್ನೂ ಇನ್‌ಸ್ಟಾಲ್ ಮಾಡಿಕೊಳ್ಳಿ ಎಂದು ಅದು ಕೇಳುತ್ತದಲ್ಲ, ಅಂತಹ ತಂತ್ರಾಂಶಗಳ ಪೈಕಿ ಬ್ಲೋಟ್‌ವೇರ್ ಕೂಡಾ ಇರುವುದು ಸಾಧ್ಯ.

Blacklist

ಬ್ಲ್ಯಾಕ್‌ಲಿಸ್ಟ್
Kannada Equivalent: ಕಪ್ಪುಪಟ್ಟಿ
Short Description : ವೀಕ್ಷಿಸಲು ಅನುಮತಿಯಿಲ್ಲದ ಜಾಲತಾಣಗಳ ಪಟ್ಟಿ
Long Description: ಕಾಮಗಾರಿಯೊಂದರ ಗುಣಮಟ್ಟದ ಬಗ್ಗೆ ಗಲಾಟೆಯಾದಾಗ ಸಂಬಂಧಪಟ್ಟ ಗುತ್ತಿಗೆದಾರರನ್ನೋ ಕಚ್ಚಾಸಾಮಗ್ರಿ ಪೂರೈಸಿದವರನ್ನೋ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎನ್ನುವ ಹೇಳಿಕೆ ಸಾಮಾನ್ಯವಾಗಿ ಕೇಳಸಿಗುತ್ತದೆ.
ಕಪ್ಪುಪಟ್ಟಿ ಎಂಬ ಈ ಹೆಸರಿನ ಮೂಲ ಇಂಗ್ಲಿಷಿನ ‘ಬ್ಲ್ಯಾಕ್‌ಲಿಸ್ಟ್’. ಯಾವುದೇ ಉದ್ದೇಶಕ್ಕೆ ಏನನ್ನು ಬಳಸಬಾರದು ಎಂದು ಸೂಚಿಸುವುದು ಈ ಪಟ್ಟಿಯ ಕೆಲಸ. ಗುತ್ತಿಗೆದಾರರ ಉದಾಹರಣೆಯನ್ನೇ ತೆಗೆದುಕೊಂಡರೆ ಮುಂದಿನ ಕಾಮಗಾರಿಯ ಗುತ್ತಿಗೆಯನ್ನು ಕಪ್ಪುಪಟ್ಟಿಯಲ್ಲಿಲ್ಲದವರಿಗೆ ಮಾತ್ರವೇ ಕೊಡುವುದು ಸಾಧ್ಯ.
ಈ ಪರಿಕಲ್ಪನೆಗೆ ಡಿಜಿಟಲ್ ಜಗತ್ತಿನಲ್ಲೂ ಅಸ್ತಿತ್ವವಿದೆ. ಯಾವುದೋ ಸಂಸ್ಥೆಯಲ್ಲಿ ನಿರ್ದಿಷ್ಟ ಜಾಲತಾಣಗಳನ್ನು (ಉದಾ: ಸಮಾಜಜಾಲಗಳು, ವೀಡಿಯೋ ತಾಣಗಳು) ನೋಡಲು ಅನುಮತಿಯಿಲ್ಲ ಎನ್ನುವುದಾದರೆ ಅವರು ಆ ತಾಣಗಳನ್ನೆಲ್ಲ ತಮ್ಮ ವ್ಯವಸ್ಥೆಯ ಕಪ್ಪುಪಟ್ಟಿಗೆ ಸೇರಿಸುತ್ತಾರೆ. ಯಾರಾದರೂ ಆ ತಾಣವನ್ನು ತೆರೆಯಲು ಪ್ರಯತ್ನಿಸಿದರೆ ಅವರಿಗೆ “ಈ ತಾಣ ತೆರೆಯುವಂತಿಲ್ಲ”ವೆಂಬ ಸಂದೇಶವಷ್ಟೇ ಕಾಣಿಸುತ್ತದೆ.
ನಿರ್ದಿಷ್ಟ ತಾಣಗಳನ್ನು ನಿರ್ಬಂಧಿಸುವ ಬದಲು ಕೆಲವೇ ತಾಣಗಳನ್ನು ವೀಕ್ಷಿಸಲು ಅನುಮತಿನೀಡುವುದೂ ಸಾಧ್ಯ. ಕಚೇರಿಯಲ್ಲಿದ್ದಾಗ ಜಿಮೇಲ್ ತಾಣವನ್ನಷ್ಟೇ ಬಳಸಬಹುದು ಎನ್ನುವುದಾದರೆ ಅದನ್ನು ಆ ಸಂಸ್ಥೆ ತನ್ನ ವ್ಯವಸ್ಥೆಯ ವೈಟ್‌ಲಿಸ್ಟ್‌ಗೆ (ಬಿಳಿಪಟ್ಟಿ) ಸೇರಿಸಬೇಕಾಗುತ್ತದೆ. ಬಿಳಿಪಟ್ಟಿಯಲ್ಲಿ ಯಾವ ತಾಣಗಳಿವೆಯೋ ಬಳಕೆದಾರರು ಅವನ್ನು ಮಾತ್ರ ತೆರೆಯುವುದು ಸಾಧ್ಯವಾಗುತ್ತದೆ.
ಸೂಕ್ತ ಆಪ್‌ಗಳನ್ನು ಬಳಸಿ ಈ ಪರಿಕಲ್ಪನೆಯನ್ನು ಮೊಬೈಲ್ ಫೋನಿನಲ್ಲೂ ಅಳವಡಿಸುವುದು ಸಾಧ್ಯ. ಅನಗತ್ಯವಾಗಿ ಕಿರಿಕಿರಿಯುಂಟುಮಾಡುವ ಕರೆಗಳಿಂದ ಪಾರಾಗಲು ಬಳಸಬಹುದಾದ ಆಪ್‌ಗಳನ್ನು ನಿಮ್ಮ ಸ್ಮಾರ್ಟ್‌ಫೋನಿನ ಆಪ್‌ಸ್ಟೋರಿನಲ್ಲಿ ಹುಡುಕಬಹುದು. ಯಾವುದೇ ಆಪ್ ಬಳಸುವ ಮುನ್ನ ಅವುಗಳ ವಿಮರ್ಶೆಯನ್ನು ಪರಿಶೀಲಿಸಲು ಮರೆಯಬೇಡಿ.

Search Dictionaries

Loading Results

Follow Us :   
  Download Bharatavani App
  Bharatavani Windows App