भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Hardware

ಹಾರ್ಡ್‌ವೇರ್
Kannada Equivalent: (ರೂಪಿಸಬೇಕಿದೆ)
Short Description : ಯಂತ್ರಾಂಶ; ಕಂಪ್ಯೂಟರ್ ಅಥವಾ ಇನ್ನಾವುದೇ ವಿದ್ಯುನ್ಮಾನ ಸಾಧನಕ್ಕೆ ಸಂಬಂಧಪಟ್ಟ ಎಲ್ಲ ಭೌತಿಕ ಭಾಗಗಳು
Long Description: ಕಂಪ್ಯೂಟರ್ ಅಥವಾ ಇನ್ನಾವುದೇ ವಿದ್ಯುನ್ಮಾನ ಸಾಧನಕ್ಕೆ ಸಂಬಂಧಪಟ್ಟ ಎಲ್ಲ ಭೌತಿಕ ಭಾಗಗಳನ್ನೂ ಹಾರ್ಡ್‌ವೇರ್ (ಯಂತ್ರಾಂಶ) ಎಂದು ಕರೆಯುತ್ತಾರೆ. ಕಂಪ್ಯೂಟರ್, ಟ್ಯಾಬ್ಲೆಟ್, ಮೊಬೈಲ್ ಫೋನ್ ಭಾಗಗಳೆಲ್ಲ ಯಂತ್ರಾಂಶಗಳೇ.
ಇಂತಹ ಯಾವುದೇ ಸಾಧನಕ್ಕೆ ಮಾಹಿತಿ ನೀಡಲು ಬಳಕೆಯಾಗುವ ಮೌಸ್, ಕೀಬೋರ್ಡ್, ಟಚ್ ಸ್ಕ್ರೀನ್, ಸ್ಕ್ಯಾನರ್, ಮೈಕ್ರೋಫೋನ್, ಕ್ಯಾಮೆರಾ ಮುಂತಾದ ಸಾಧನಗಳನ್ನು ಇನ್‌ಪುಟ್ ಡಿವೈಸಸ್ ಎಂದು ಕರೆಯುತ್ತಾರೆ. ಈ ಸಾಧನಗಳನ್ನು ಬಳಸಿ ನಾವು ಕಂಪ್ಯೂಟರಿಗೆ – ಮೊಬೈಲ್ ಫೋನ್‌ಗೆ ಆದೇಶ ನೀಡುವುದು, ದತ್ತಾಂಶವನ್ನು (ಡೇಟಾ) ಪೂರೈಸುವುದು ಸಾಧ್ಯ.
ಇದೇ ರೀತಿ ಇಂತಹ ಸಾಧನಗಳು ಸಂಸ್ಕರಿಸಿದ ಮಾಹಿತಿಯನ್ನು ಮರಳಿ ಪಡೆದುಕೊಳ್ಳಲು (ಔಟ್‌ಪುಟ್) ಬಳಕೆಯಾಗುವ ಮಾನಿಟರ್, ಸ್ಪೀಕರ್, ಪ್ರಿಂಟರ್ ಮುಂತಾದ ಸಾಧನಗಳಿಗೆ ಔಟ್‌ಪುಟ್ ಡಿವೈಸಸ್ ಎಂದು ಹೆಸರು.
ಇನ್‌ಪುಟ್ ಹಾಗೂ ಔಟ್‌ಪುಟ್ ಎರಡನ್ನೂ ನಿಭಾಯಿಸಬಲ್ಲ ಯಂತ್ರಾಂಶಗಳೂ ಇವೆ. ಸ್ಮಾರ್ಟ್‌ಫೋನಿನ ಸ್ಪರ್ಶಸಂವೇದಿ ಪರದೆ (ಟಚ್‌ಸ್ಕ್ರೀನ್) ಇಂತಹ ಸಾಧನಗಳಿಗೊಂದು ಉದಾಹರಣೆ.
ಈಗ ನಮ್ಮ ಮೊಬೈಲಿಗೆ ವಾಟ್ಸ್‌ಆಪ್ ಮೂಲಕ ಯಾರೋ ಒಂದು ವೀಡಿಯೋ ಕಳುಹಿಸಿದ್ದಾರೆ ಎಂದುಕೊಳ್ಳೋಣ. ನಾವು ಮೊಬೈಲ್ ಪರದೆಯ ಮೇಲಿರುವ ‘ಪ್ಲೇ’ ಗುರುತನ್ನು ಒಮ್ಮೆ ಮುಟ್ಟುವ ಮೂಲಕ ಇನ್‌ಪುಟ್ ನೀಡುತ್ತೇವೆ. ಅದನ್ನು ಗುರುತಿಸುವ ಮೊಬೈಲಿನ ತಂತ್ರಾಂಶ ವೀಡಿಯೋ ಪ್ರದರ್ಶಿಸುತ್ತದೆ – ಪರದೆಯ ಮೇಲೆ ಚಿತ್ರ ಹಾಗೂ ಸ್ಪೀಕರ್ ಮೂಲಕ ಧ್ವನಿಯ ಔಟ್‌ಪುಟ್ ನಮ್ಮನ್ನು ತಲುಪುತ್ತದೆ.

Heat Sink

ಹೀಟ್ ಸಿಂಕ್
Kannada Equivalent: (ರೂಪಿಸಬೇಕಿದೆ)
Short Description : ವಿದ್ಯುನ್ಮಾನ ಉಪಕರಣಗಳ ಕಾರ್ಯಾಚರಣೆ ಸಂದರ್ಭದಲ್ಲಿ ಉತ್ಪತ್ತಿಯಾಗುವ ಶಾಖವನ್ನು ಚದರಿಸುವ ಸಾಧನ
Long Description: ಕಂಪ್ಯೂಟರಿನ ಕೇಂದ್ರೀಯ ಸಂಸ್ಕರಣ ಘಟಕ, ಅಂದರೆ ಸಿಪಿಯುನಂತೆ ಕೆಲಸಮಾಡುವುದು ಅದರ ಪ್ರಾಸೆಸರ್. ಈ ಸಾಧನಕ್ಕೆ ಪ್ರತಿ ಸೆಕೆಂಡಿಗೆ ಲಕ್ಷಗಟ್ಟಲೆ ಲೆಕ್ಕಾಚಾರಗಳನ್ನು ನಿಭಾಯಿಸುವ ಸಾಮರ್ಥ್ಯ ಇರುತ್ತದೆ.
ಅಷ್ಟೆಲ್ಲ ಲೆಕ್ಕಾಚಾರಗಳನ್ನು ಒಂದೇಸಮನೆ ಮಾಡುವಾಗ ನಡೆಯುವ ವಿದ್ಯುನ್ಮಾನ ವಿದ್ಯಮಾನಗಳಿಂದಾಗಿ ಪ್ರಾಸೆಸರ್ ಬಲುಬೇಗನೆ ಬಿಸಿಯಾಗಿಬಿಡುತ್ತದೆ. ಈ ಉಷ್ಣತೆ ಸುಮಾರು ೫೦-೬೦ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವುದೂ ಸಾಧ್ಯ. ಹೀಗೆ ಉತ್ಪತ್ತಿಯಾಗುವ ಶಾಖವನ್ನು ಸರಿಯಾಗಿ ನಿಭಾಯಿಸದೆ ಹೋದರೆ ಅದು ಹಾಳಾಗುವ ಪರಿಸ್ಥಿತಿಯೂ ಬರಬಹುದು.
ಹೀಗಾಗಿಯೇ ಶಾಖವನ್ನು ಚದರಿಸುವ (ಡಿಸಿಪೇಟ್) ಲೋಹದ ಸಾಧನವೊಂದನ್ನು ಪ್ರಾಸೆಸರ್‌ಗೆ ಅಳವಡಿಸಲಾಗಿರುತ್ತದೆ. ತನ್ನ ಪದರಗಳ ಮೂಲಕ ಶಾಖವನ್ನು ಚದರಿಸಿ ಪ್ರಾಸೆಸರ್ ಮಿತಿಮೀರಿ ಬಿಸಿಯಾಗದಂತೆ ತಡೆಯುವ ಈ ಸಾಧನವನ್ನು ‘ಹೀಟ್ ಸಿಂಕ್’ (ಶಾಖ ಉಡುಗಿಸುವ ಸಾಧನ ಎಂಬ ಅರ್ಥದಲ್ಲಿ) ಎಂದು ಕರೆಯುತ್ತಾರೆ.
ಬಹಳಷ್ಟು ಸಾರಿ ಈ ಸಾಧನದ ವಿಸ್ತೀರ್ಣ ಪ್ರಾಸೆಸರ್‌ನ ವಿಸ್ತೀರ್ಣದಷ್ಟೇ ಇರುತ್ತದೆ (ಹಾಗಾಗಿ ಅವನ್ನು ಪ್ರಾಸೆಸರ್ ಮೇಲೆ ಅಂಟಿಸುವುದು ಸಾಧ್ಯವಾಗುತ್ತದೆ); ಕಡಿಮೆ ವಿಸ್ತೀರ್ಣದಲ್ಲೇ ಸಮಾಂತರವಾಗಿರುವ ಲೋಹದ ತೆಳುವಾದ ಫಲಕಗಳನ್ನು ಬಳಸುವ ಮೂಲಕ ಶಾಖವನ್ನು ಕ್ಷಿಪ್ರವಾಗಿ ಚದರಿಸುವುದು ಇದರ ವೈಶಿಷ್ಟ್ಯ. ಬಹುತೇಕ ಹೀಟ್ ಸಿಂಕ್‌ಗಳ ಜೊತೆಗೆ ಒಂದು ಫ್ಯಾನ್ ಕೂಡ ಇರುತ್ತದೆ. ಹೀಟ್ ಸಿಂಕ್ ಮೂಲಕ ಹಾದುಬರುವ ಶಾಖವನ್ನು ಇನ್ನಷ್ಟು ದೂರಕ್ಕೆ ಚದರಿಸಿ ಹೀಟ್ ಸಿಂಕ್‌ನ ಉಷ್ಣತೆಯನ್ನೂ ನಿರ್ದಿಷ್ಟ ಮಟ್ಟದಲ್ಲೇ ಕಾಪಾಡುವುದು ಫ್ಯಾನ್ ಬಳಸುವುದರ ಹಿಂದಿನ ಉದ್ದೇಶ.
ಕಂಪ್ಯೂಟರ್‌ನ ಪ್ರಾಸೆಸರ್ ಮಾತ್ರವಲ್ಲದೆ ಜಿಪಿಯು ಹಾಗೂ ವೀಡಿಯೋ ಕಾರ್ಡ್‌ನಂತಹ ಸಾಧನಗಳಲ್ಲೂ ಹೀಟ್ ಸಿಂಕ್ ಬಳಕೆ ಸಾಮಾನ್ಯ.

WHOIS

ಹೂಈಸ್
Kannada Equivalent: (ರೂಪಿಸಬೇಕಿದೆ)
Short Description : ಯಾವುದೇ ಜಾಲತಾಣ ಯಾರ ಹೆಸರಿನಲ್ಲಿ ನೋಂದಣಿಯಾಗಿದೆ – ಅವರ ಸಂಪರ್ಕ ವಿವರಗಳೇನು ಎನ್ನುವುದನ್ನೆಲ್ಲ ತಿಳಿಸುವ ವ್ಯವಸ್ಥೆ
Long Description: ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್‌ವೈಡ್ ವೆಬ್) ಅಪಾರ ಸಂಖ್ಯೆಯ ಜಾಲತಾಣಗಳಿವೆ. ಹೊರಪ್ರಪಂಚದ ಸೈಟುಗಳಂತೆಯೇ ವೆಬ್‌ಲೋಕದ ಈ ಸೈಟುಗಳಿಗೂ ಮಾಲೀಕರಿರುತ್ತಾರೆ. ಮನೆಕಟ್ಟಲು ಸೈಟು ಕೊಳ್ಳುವಾಗ ಮಾಡುವಂತೆ ಜಾಲತಾಣವನ್ನು ನೋಂದಾಯಿಸುವಾಗಲೂ ಅದನ್ನು ಕೊಳ್ಳುತ್ತಿರುವವರು ಯಾರು ಎನ್ನುವುದರ ಬಗ್ಗೆ ಮಾಹಿತಿ ನೀಡಬೇಕಾದ್ದು ಕಡ್ಡಾಯ.
ಜಾಲತಾಣಗಳನ್ನು ನಮ್ಮ ಹೆಸರಿಗೆ ನೋಂದಾಯಿಸಿಕೊಡುವ ‘ರಿಜಿಸ್ಟ್ರಾರ್’ಗಳೆಂಬ ಸಂಸ್ಥೆಗಳು ‘ದಿ ಇಂಟರ್‌ನೆಟ್ ಕಾರ್ಪೊರೇಶನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್’ (ಐಕ್ಯಾನ್) ಎಂಬ ಜಾಗತಿಕ ಸಂಘಟನೆಯ ಪರವಾಗಿ ಈ ಮಾಹಿತಿಯನ್ನು ಸಂಗ್ರಹಿಸಿ ಶೇಖರಿಸಿಡುತ್ತವೆ.
ಹೀಗೆ ಸಂಗ್ರಹವಾಗುತ್ತದಲ್ಲ ಮಾಹಿತಿ, ಅಂತರಜಾಲದ ಮುಕ್ತ ಸ್ವರೂಪಕ್ಕೆ ಅನುಗುಣವಾಗಿ ಅದನ್ನೂ ಮುಕ್ತವಾಗಿ ತೆರೆದಿಡಲಾಗುತ್ತದೆ. ಅಂದರೆ, ಯಾವುದೇ ಜಾಲತಾಣ ಯಾರ ಹೆಸರಿನಲ್ಲಿ ನೋಂದಣಿಯಾಗಿದೆ – ಅವರ ಸಂಪರ್ಕ ವಿವರಗಳೇನು ಎನ್ನುವುದನ್ನೆಲ್ಲ ಯಾರು ಬೇಕಾದರೂ ತಿಳಿಯುವುದು ಸಾಧ್ಯ. ಈ ಸೌಲಭ್ಯವನ್ನು ಒದಗಿಸಿಕೊಡುವ ವ್ಯವಸ್ಥೆಯೇ ‘ಹೂ ಈಸ್’ (WHOIS).
ಐಕ್ಯಾನ್ ಸಂಸ್ಥೆ ನಿರ್ವಹಿಸುವ whois.icann.orgಗೆ ಭೇಟಿನೀಡಿ ಅಲ್ಲಿ ನಾವು ತಿಳಿಯಬೇಕೆಂದಿರುವ ತಾಣದ ವಿಳಾಸ ದಾಖಲಿಸಿದರೆ ಸಾಕು, ಅದರ ನೋಂದಣಿ ಕುರಿತ ವಿವರಗಳನ್ನು ಪಡೆದುಕೊಳ್ಳುವುದು ಸಾಧ್ಯ.
ಹೀಗೆ ದೊರಕುವ ಮಾಹಿತಿಯನ್ನು ಸ್ಪಾಮ್ ಸಂದೇಶಗಳನ್ನು ಕಳಿಸಲು, ಫಿಶಿಂಗ್ ಪ್ರಯತ್ನಗಳನ್ನು ನಡೆಸಲು ಬಳಸುವ ಸಾಧ್ಯತೆ ಇರುತ್ತದಲ್ಲ, ಹಾಗಾಗಿ ಹೂ ಈಸ್ ಜಾಲತಾಣದಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ, ಈ ವ್ಯವಸ್ಥೆಯ ಮೂಲಕ ನಮ್ಮ ಖಾಸಗಿ ಮಾಹಿತಿ ಎಲ್ಲರಿಗೂ ಕಾಣದಂತೆ ಮಾಡುವ ‘ಡೊಮೈನ್ ಪ್ರೈವಸಿ’ ಸೌಲಭ್ಯವನ್ನೂ ಹಲವು ರಿಜಿಸ್ಟ್ರಾರ್‌ಗಳು ಪರಿಚಯಿಸಿದ್ದಾರೆ (ಬಹಳಷ್ಟು ಸಾರಿ ಇದಕ್ಕಾಗಿ ಹೆಚ್ಚುವರಿ ಶುಲ್ಕ ನೀಡಬೇಕಾಗುತ್ತದೆ).

Hyperlink

ಹೈಪರ್‌ಲಿಂಕ್
Kannada Equivalent: (ರೂಪಿಸಬೇಕಿದೆ)
Short Description : ಪಠ್ಯದ ಒಂದು ತುಣುಕು ಅಥವಾ ಚಿತ್ರದ ಮೇಲೆ ಕ್ಲಿಕ್ ಮಾಡುವ ಮೂಲಕ ಜಾಲಲೋಕದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವುದನ್ನು ಸಾಧ್ಯವಾಗಿಸಿರುವ ಪರಿಕಲ್ಪನೆ
Long Description: ಅಂತರಜಾಲದ ತುಂಬ ಪರಸ್ಪರ ಸಂಪರ್ಕದಲ್ಲಿರುವ ಅಸಂಖ್ಯ ಸಾಧನಗಳಿವೆ. ಇನ್ನು ವಿಶ್ವವ್ಯಾಪಿ ಜಾಲದಲ್ಲಂತೂ (ವರ್ಲ್ಡ್‌ವೈಡ್ ವೆಬ್) ಕ್ಲಿಕ್ ಮಾಡುತ್ತ ಹೋಗಲು ಅಪರಿಮಿತ ಆಯ್ಕೆಗಳು. ಎಲ್ಲೋ ಯಾವುದೋ ಒಂದು ಪುಟದಿಂದ ಪ್ರಾರಂಭಿಸುವ ನಾವು ಕೆಲವೇ ನಿಮಿಷಗಳಲ್ಲಿ ಎಲ್ಲಿಂದ ಎಲ್ಲಿಗೋ ಹೋಗಿ ತಲುಪಿರುತ್ತೇವೆ. ಎಷ್ಟಾದರೂ ಇದರ ಹೆಸರಿನಲ್ಲೇ ವೆಬ್ (ಬಲೆ) ಇದೆಯಲ್ಲ!
ಪಠ್ಯದ ಒಂದು ತುಣುಕು ಅಥವಾ ಚಿತ್ರದ ಮೇಲೆ ಕ್ಲಿಕ್ ಮಾಡುವ ಮೂಲಕ ಜಾಲಲೋಕದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಥಟ್ಟನೆ ಹಾರುವುದನ್ನು ಸಾಧ್ಯವಾಗಿಸಿರುವ ಪರಿಕಲ್ಪನೆಯೇ ‘ಹೈಪರ್‌ಲಿಂಕ್’. ವಿಶ್ವವ್ಯಾಪಿ ಜಾಲದ ಯಾವುದೋ ಮೂಲೆಯಲ್ಲಿ ಯಾವುದೋ ಸರ್ವರ್‌ನಲ್ಲಿ ಅಡಗಿರುವ ವೆಬ್ ಪುಟ ಅಥವಾ ಕಡತವನ್ನು ಮೌಸಿನ ಒಂದೇ ಕ್ಲಿಕ್ ಮೂಲಕ ತೆರೆಯುವುದು ಹೈಪರ್‌ಲಿಂಕ್‌ನಿಂದಾಗಿ ಸಾಧ್ಯವಾಗುತ್ತದೆ.
ದಿನಬಳಕೆಯ ಭಾಷೆಯಲ್ಲಿ ‘ಲಿಂಕ್’ ಎಂದಷ್ಟೇ ಕೂಡ ಗುರುತಿಸಿಕೊಳ್ಳುವ ಹೈಪರ್‌ಲಿಂಕ್, ವೆಬ್‌ಪುಟದ ಒಂದು ಭಾಗದಿಂದ ಬೇರೊಂದು ಭಾಗ, ಪುಟ ಅಥವಾ ತಾಣದಲ್ಲಿರುವ ಮಾಹಿತಿಗೆ ಸಂಪರ್ಕ ನೀಡುವ ಕೊಂಡಿ. ಈ ಕೊಂಡಿಗಳು ಪಠ್ಯ ಅಥವಾ ಚಿತ್ರದ ರೂಪದಲ್ಲಿ ಇರಬಹುದು. ಪಠ್ಯರೂಪದ ಕೊಂಡಿಗಳನ್ನು ಸಾಮಾನ್ಯವಾಗಿ ಅವುಗಳ ಕೆಳಗಿರುವ ಅಡ್ಡಗೆರೆಯಿಂದ (ಅಂಡರ್‌ಲೈನ್) ಅಥವಾ ವಿಭಿನ್ನ ಬಣ್ಣದಿಂದ ಗುರುತಿಸಬಹುದು.
ಹೈಪರ್‌ಲಿಂಕ್‌ಗಳಿರುವ ಪಠ್ಯವನ್ನು ಹೈಪರ್‌ಟೆಕ್ಸ್ಟ್ ಎಂದು ಗುರುತಿಸಲಾಗುತ್ತದೆ. ಪಠ್ಯ ಮಾತ್ರವೇ ಅಲ್ಲದೆ ಚಿತ್ರ, ಧ್ವನಿ, ವಿಡಿಯೋ ಮುಂತಾದ ಬಹುಮಾಧ್ಯಮ ರೂಪದಲ್ಲೂ ಕೊಂಡಿಗಳಿದ್ದರೆ ಆ ಮಾಹಿತಿಯನ್ನು ಹೈಪರ್‌ಮೀಡಿಯಾ ಎಂದು ಗುರುತಿಸುವ ಅಭ್ಯಾಸವೂ ಇದೆ.

Hybrid Computer

ಹೈಬ್ರಿಡ್ ಕಂಪ್ಯೂಟರ್
Kannada Equivalent: (ರೂಪಿಸಬೇಕಿದೆ)
Short Description : ಪರದೆ-ಕೀಲಿಮಣೆಗಳನ್ನು ಅಗತ್ಯಬಿದ್ದಾಗ ಬೇರ್ಪಡಿಸಿ ಬಳಸಬಹುದಾದ ಕಂಪ್ಯೂಟರ್
Long Description: ಲ್ಯಾಪ್‌ಟಾಪ್ ಕಂಪ್ಯೂಟರಿನಲ್ಲಿ ಅನುಕೂಲಕರ ಗಾತ್ರದ ಪರದೆಯಿರುತ್ತದೆ, ಕೀಲಿಮಣೆಯೂ ಇರುತ್ತದೆ. ಆದರೆ ಕೊಂಚಹೊತ್ತು ಸುಮ್ಮನೆ ಕುಳಿತು ಸಿನಿಮಾ ನೋಡಬೇಕೆನಿಸಿದಾಗ ಅದರ ಗಾತ್ರ ಕಿರಿಕಿರಿಮಾಡುತ್ತದೆ, ತೂಕವೂ ಜಾಸ್ತಿಯೆನಿಸುತ್ತದೆ. ಈ ಕೆಲಸಕ್ಕೆ ಟ್ಯಾಬ್ಲೆಟ್ ಬಳಕೆ ಸುಲಭ ಎನಿಸಿದರೂ ಮತ್ತೆ ಯಾವುದೋ ಇಮೇಲ್ ಕಳಿಸುವಾಗ ಕೀಲಿಮಣೆ ಬೇಕು ಎಂಬ ಭಾವನೆ ಮೂಡುತ್ತದೆ.
ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನವಾಗಿ ರೂಪುಗೊಂಡಿರುವುದೇ ಹೈಬ್ರಿಡ್ ಕಂಪ್ಯೂಟರ್. ಲ್ಯಾಪ್‌ಟಾಪಿನಂತೆ ಇದರಲ್ಲೂ ಪರದೆ-ಕೀಲಿಮಣೆ ಇರುತ್ತದಾದರೂ ಅವನ್ನು ಬೇಕೆಂದಾಗ ಬೇರ್ಪಡಿಸಬಹುದು ಎನ್ನುವುದು ವಿಶೇಷ. ಸಿನಿಮಾ ನೋಡುವಾಗ ಪರದೆಯನ್ನಷ್ಟೆ (ಟ್ಯಾಬ್ಲೆಟ್ಟಿನಂತೆ) ಬಳಸಿ ಇಮೇಲ್ ಟೈಪ್ ಮಾಡುವಾಗ ಕೀಲಿಮಣೆಯನ್ನು ಜೋಡಿಸಿಕೊಳ್ಳಬಹುದು. ಇಮೇಲ್ ಮುಗಿಸಿದ ಮೇಲೆ ಕೀಲಿಮಣೆ ಕಿತ್ತಿಟ್ಟರಾಯಿತು, ಆವರೆಗೂ ಲ್ಯಾಪ್‌ಟಾಪ್ ಆಗಿದ್ದದ್ದು ಟ್ಯಾಬ್ಲೆಟ್ ಆಗಿ ಬದಲಾಗಿಬಿಡುತ್ತದೆ!
ಕೆಲವು ಹೈಬ್ರಿಡ್ ಕಂಪ್ಯೂಟರ್ ಮಾದರಿಗಳಲ್ಲಿ ಪ್ರತ್ಯೇಕ ಕೀಲಿಮಣೆ ಇದ್ದರೆ ಇನ್ನು ಕೆಲವು ಮಾದರಿಗಳಲ್ಲಿ ಪರದೆಯನ್ನು ಮುಚ್ಚುವ ಕವಚದಲ್ಲೇ (ಟ್ಯಾಬ್ಲೆಟ್ ಕವರ್) ಕೀಲಿಮಣೆಯೂ ಅಡಕವಾಗಿರುತ್ತದೆ. ಪ್ರತ್ಯೇಕ ಕೀಲಿಮಣೆ ಇರುವ ಮಾದರಿಗಳಲ್ಲಿ ಟ್ಯಾಬ್ಲೆಟ್‌ನಂತೆ ಬಳಸುವ ಭಾಗವನ್ನು ಕೀಲಿಮಣೆಯ ಮೇಲೆ (ಲ್ಯಾಪ್‌ಟಾಪ್ ಪರದೆಯಂತೆ) ಜೋಡಿಸಿಕೊಳ್ಳುವುದು ಸಾಧ್ಯ. ಕವಚದಲ್ಲಿ ಅಡಕವಾಗಿರುವ ತೆಳುವಾದ ಕೀಲಿಮಣೆಗೆ ಈ ಸಾಮರ್ಥ್ಯವಿರುವುದಿಲ್ಲವಲ್ಲ, ಅಂತಹ ಮಾದರಿಗಳಲ್ಲಿ ಟ್ಯಾಬ್ಲೆಟ್‌ಗೊಂದು ಪ್ರತ್ಯೇಕ ಸ್ಟಾಂಡ್ ಇರುತ್ತದೆ.
ಹೈಬ್ರಿಡ್ ಕಂಪ್ಯೂಟರುಗಳನ್ನು ‘ಟೂ-ಇನ್-ಒನ್’ ಅಥವಾ ‘ಟ್ಯಾಬ್ಲೆಟ್-ಲ್ಯಾಪ್‌ಟಾಪ್ ಹೈಬ್ರಿಡ್’ಗಳೆಂದೂ ಗುರುತಿಸಲಾಗುತ್ತದೆ.

Hybrid SIM slot

ಹೈಬ್ರಿಡ್ ಸಿಮ್ ಸ್ಲಾಟ್
Kannada Equivalent: (ರೂಪಿಸಬೇಕಿದೆ)
Short Description : ಮೊಬೈಲ್ ಫೋನಿನಲ್ಲಿ ಹೆಚ್ಚುವರಿ ಸಿಮ್ ಅಥವಾ ಮೆಮೊರಿ ಕಾರ್ಡ್‌ಗಳ ಪೈಕಿ ಯಾವುದಾದರೂ ಒಂದನ್ನು ಮಾತ್ರ ಬಳಸಲು ಅನುವುಮಾಡಿಕೊಡುವ ವಿನ್ಯಾಸ
Long Description: ಬೇರೆಬೇರೆ ಉದ್ದೇಶಗಳಿಗೆ ಬೇರೆಬೇರೆ ಸಿಮ್ ಬಳಸುವವರ ಸಂಖ್ಯೆ ಹೆಚ್ಚಿರುವುದರಿಂದ ಈಗ ಎರಡು ಸಿಮ್ ಇರುವ (ಡ್ಯುಯಲ್ ಸಿಮ್) ಮೊಬೈಲುಗಳಿಗೆ ಬೇಡಿಕೆ ಜಾಸ್ತಿ. ಮೊಬೈಲಿನಲ್ಲಿ ಶೇಖರಿಸುವ ಮಾಹಿತಿ ಜಾಸ್ತಿಯಾದಂತೆ ಹೆಚ್ಚುವರಿ ಶೇಖರಣಾ ಸಾಮರ್ಥ್ಯಕ್ಕಾಗಿ ಮೆಮೊರಿ ಕಾರ್ಡ್ ಸೌಲಭ್ಯವೂ ಬೇಕೆನಿಸುವುದು ಸಹಜ.
ಇವೆರಡೂ ಬೇಡಿಕೆಗಳನ್ನು ಈಡೇರಿಸುವ ಬದಲು ಹೆಚ್ಚುವರಿ ಸಿಮ್ ಅಥವಾ ಮೆಮೊರಿ ಕಾರ್ಡ್‌ಗಳ ಪೈಕಿ ಯಾವುದಾದರೂ ಒಂದನ್ನು ಬಳಸಲು ಅನುವಾಗುವಂತೆ ಮೊಬೈಲ್ ತಯಾರಕರು ‘ಹೈಬ್ರಿಡ್ ಸಿಮ್ ಸ್ಲಾಟ್’ ಪರಿಕಲ್ಪನೆಯನ್ನು ರೂಪಿಸಿದ್ದಾರೆ. ಈ ವಿನ್ಯಾಸವನ್ನು ಅಳವಡಿಸಿಕೊಂಡ ಮೊಬೈಲುಗಳಲ್ಲಿ ಮೆಮೊರಿ ಕಾರ್ಡ್ ಬಳಸಬೇಕೆಂದರೆ ಒಂದೇ ಸಿಮ್ ಮಾತ್ರ ಉಪಯೋಗಿಸುವುದು ಸಾಧ್ಯವಾಗುತ್ತದೆ. ಮೆಮೊರಿ ಕಾರ್ಡ್ ಸೌಲಭ್ಯ ಬೇಡವೆಂದರೆ ಮಾತ್ರ ಎರಡು ಸಿಮ್‌ಗಳ ಬಳಕೆ ಸಾಧ್ಯ.
ಮೊಬೈಲ್ ಗಾತ್ರ ಕಡಿಮೆಯಿರಬೇಕು, ಆದರೆ ಸಾಮರ್ಥ್ಯ ಮಾತ್ರ ಹೆಚ್ಚಿರಬೇಕು ಎನ್ನುವ ಅಭಿಪ್ರಾಯ ಈಚೆಗೆ ವ್ಯಾಪಕವಾಗಿದೆಯಲ್ಲ, ಇದಕ್ಕೆ ಸ್ಪಂದನೆಯಾಗಿ ಮೊಬೈಲ್ ತಯಾರಕರು ಸೀಮಿತ ಗಾತ್ರದ ಸಾಧನದೊಳಗೇ ಆದಷ್ಟೂ ಹೆಚ್ಚಿನ ಸವಲತ್ತುಗಳನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ. ಹೈಬ್ರಿಡ್ ಸಿಮ್ ಸ್ಲಾಟ್ ರೂಪುಗೊಂಡಿರುವುದು ಸ್ಥಳಾವಕಾಶ ಉಳಿಸುವ ಇದೇ ಪ್ರಯತ್ನದ ಫಲವಾಗಿ.
ನಿಮಗೆ ಹೆಚ್ಚುವರಿ ಸಿಮ್ ಹಾಗೂ ಮೆಮೊರಿ ಕಾರ್ಡ್ ಎರಡೂ ಸೌಲಭ್ಯಗಳು ಬೇಕೆನಿಸಿದ್ದರೆ ಹೈಬ್ರಿಡ್ ಸಿಮ್ ಸ್ಲಾಟ್ ಇಲ್ಲದಿರುವ ಫೋನನ್ನೇ ಕೊಳ್ಳುವುದು ಉತ್ತಮ. ಮೆಮೊರಿ ಕಾರ್ಡ್ ಹಾಗೂ ಹೆಚ್ಚುವರಿ ಸಿಮ್ ಎರಡನ್ನೂ ಬಳಸಲು ಸಾಧ್ಯವಿರುವ ಹಲವು ಮಾದರಿಯ ಮೊಬೈಲುಗಳು ಇದೀಗ ಮಾರುಕಟ್ಟೆಯಲ್ಲಿವೆ. ನಿಮ್ಮ ಆಯ್ಕೆಯ ಫೋನಿನಲ್ಲಿ ಸಾಕಷ್ಟು ಆಂತರಿಕ ಶೇಖರಣಾ ಸಾಮರ್ಥ್ಯವೇ (ಇಂಟರ್ನಲ್ ಸ್ಟೋರೇಜ್) ಇದ್ದರೆ, ಅಥವಾ ನಿಮಗೆ ಎರಡನೆಯ ಸಿಮ್ ಅಗತ್ಯ ಇಲ್ಲದಿದ್ದರೆ ಈ ಕುರಿತು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

Hosting

ಹೋಸ್ಟಿಂಗ್
Kannada Equivalent: (ರೂಪಿಸಬೇಕಿದೆ)
Short Description : ಜಾಲತಾಣದ ಮಾಹಿತಿಯನ್ನು ಅಗತ್ಯ ಕ್ರಮವಿಧಿಗಳ ಜೊತೆಗೆ ವೆಬ್‌ಸರ್ವರ್‌ನಲ್ಲಿ ಶೇಖರಿಸಿಡುವ ಕೆಲಸ
Long Description: ನಮ್ಮದೇ ಜಾಲತಾಣಗಳನ್ನು ರೂಪಿಸಿಕೊಳ್ಳಲು ಹೊರಟಾಗ ನಾವು ಮಾಡಬೇಕಾದ ಮೊದಲ ಕೆಲಸವೆಂದರೆ ನಮ್ಮ ಆಯ್ಕೆಯ ವಿಳಾಸ, ಅಂದರೆ ಯುಆರ್‌ಎಲ್ ಅನ್ನು ಪಡೆದುಕೊಳ್ಳುವುದು. ಯುಆರ್‌ಎಲ್‌ಗಳನ್ನು ಒದಗಿಸುವ ಸಂಸ್ಥೆಗಳಿಗೆ ರಿಜಿಸ್ಟ್ರಾರ್‌ಗಳೆಂದು ಹೆಸರು. ನಮಗೆ ಬೇಕಾದ ವಿಳಾಸವನ್ನು ವರ್ಷಕ್ಕೆ ಇಂತಿಷ್ಟು ಎಂದು ಶುಲ್ಕ ಪಾವತಿಸುವ ಮೂಲಕ ಇಂತಹ ರಿಜಿಸ್ಟ್ರಾರ್‌ಗಳಿಂದ ಪಡೆದುಕೊಳ್ಳಬಹುದು. ಈ ಬಾಡಿಗೆಯ ಮೊತ್ತ ಒಂದೆರಡು ನೂರು ರೂಪಾಯಿಗಳಿಂದ ಸಾವಿರಗಳವರೆಗೂ ಇರಬಹುದು. ಕೆಲವೊಮ್ಮೆ ಪ್ರಾಯೋಜಕರು ಅವನ್ನು ಉಚಿತವಾಗಿ ನೀಡುವುದೂ ಇದೆ.
ವಿಳಾಸ ಪಡೆದುಕೊಂಡ ಮೇಲೆ ಜಾಲತಾಣ ನಿರ್ಮಿಸಬೇಕಲ್ಲ. ನಾವು ಹೇಳಬೇಕೆಂದಿರುವ ಮಾಹಿತಿಯನ್ನು ಚಿತ್ರಗಳು, ಪಠ್ಯ, ಧ್ವನಿ ಮುಂತಾದ ಮಾಧ್ಯಮಗಳ ಮೂಲಕ ಹಲವಾರು ಪುಟಗಳಲ್ಲಿ (ವೆಬ್‌ಪೇಜ್) ನಿರೂಪಿಸಿ ಆ ಮಾಹಿತಿಯನ್ನು ಅಗತ್ಯ ಕ್ರಮವಿಧಿಗಳ ಜೊತೆಗೆ ವೆಬ್‌ಸರ್ವರ್ ಒಂದರಲ್ಲಿ ಶೇಖರಿಸಿಡುವುದು ಈ ಹೆಜ್ಜೆಯ ಕೆಲಸ. ಇದಕ್ಕೆ ಹೋಸ್ಟಿಂಗ್ ಎಂದು ಕರೆಯುತ್ತಾರೆ. ಹೋಸ್ಟಿಂಗ್ ಸೇವೆ ಒದಗಿಸುವ ಸಂಸ್ಥೆಗಳಿಗೂ ವರ್ಷಕ್ಕಿಷ್ಟು ಎನ್ನುವ ಲೆಕ್ಕದಲ್ಲಿ ಬಾಡಿಗೆ ನೀಡಬೇಕಾಗುತ್ತದೆ. ನಮ್ಮ ಜಾಲತಾಣದಲ್ಲಿ ಎಷ್ಟು ಪ್ರಮಾಣದ ಮಾಹಿತಿ ಇದೆ, ಅದಕ್ಕೆ ಎಷ್ಟು ಜನ ಭೇಟಿನೀಡುತ್ತಾರೆ ಎನ್ನುವ ಅಂಶಗಳನ್ನೂ ಬಾಡಿಗೆ ನಿಗದಿಪಡಿಸುವಾಗ ಪರಿಗಣಿಸಲಾಗುತ್ತದೆ.
ಸಾಮಾನ್ಯವಾಗಿ ಡೊಮೈನ್ ನೇಮ್‌ಗಳನ್ನು ಒದಗಿಸುವ ರಿಜಿಸ್ಟ್ರಾರ್‌ಗಳೇ ವೆಬ್ ಹೋಸ್ಟಿಂಗ್ ಸೇವೆಯನ್ನೂ ಒದಗಿಸುತ್ತವೆ. ನಮ್ಮ ತಾಣಕ್ಕೆ ಬೇಕಾದಷ್ಟು ಜಾಗ, ಅಗತ್ಯವಾದ ತಂತ್ರಾಂಶಗಳು, ಇಮೇಲ್ ವ್ಯವಸ್ಥೆ ಮೊದಲಾದವನ್ನೆಲ್ಲ ಹೊಂದಿಸಿಕೊಡುವುದು ಈ ಸಂಸ್ಥೆಗಳ ಜವಾಬ್ದಾರಿ.

Handle

ಹ್ಯಾಂಡಲ್
Kannada Equivalent: (ರೂಪಿಸಬೇಕಿದೆ)
Short Description : ಸಮಾಜಜಾಲದ ನಿರ್ದಿಷ್ಟ ಬಳಕೆದಾರರನ್ನು ಗುರುತಿಸಲು ಬಳಸಬಹುದಾದ ಹೆಸರು
Long Description: ಇಮೇಲ್ ವಿಳಾಸಗಳಲ್ಲೊಂದು ವೈಶಿಷ್ಟ್ಯವಿದೆ. ಒಂದು ವಿಳಾಸವನ್ನು ಒಬ್ಬರಿಗೆ ಮಾತ್ರವೇ ನೀಡಲು ಸಾಧ್ಯ ಎನ್ನುವುದೇ ಆ ಅಂಶ. ಅಂದರೆ, gmail.com ತಾಣದಲ್ಲಿ xyz ಎಂಬ ಹೆಸರನ್ನು ನೀವು ಆರಿಸಿಕೊಂಡರೆ xyz@gmail.com ನೀವು ಮಾತ್ರವೇ ಆಗಿರಲು ಸಾಧ್ಯ.
ಸಮಾಜಜಾಲ, ಅಂದರೆ ಸೋಶಿಯಲ್ ನೆಟ್‌ವರ್ಕ್‌ಗಳಲ್ಲೂ ಅಷ್ಟೇ. ಜನ ನಮ್ಮನ್ನು ಗುರುತಿಸಲು ಬಳಸಬಹುದಾದ ಒಂದು ನಿರ್ದಿಷ್ಟ ಹೆಸರನ್ನು ಅಲ್ಲಿಯೂ ಬಳಸಲಾಗುತ್ತದೆ. ‘ಹ್ಯಾಂಡಲ್’ ಎನ್ನುವುದು ಈ ಹೆಸರಿನ ಹೆಸರು. ಇದೂ ಕೂಡ ಇಮೇಲ್ ವಿಳಾಸದ ಮೊದಲರ್ಧವಿದ್ದಂತೆಯೇ: ಒಂದು ಸಮಾಜಜಾಲದಲ್ಲಿ ಒಂದು ಹ್ಯಾಂಡಲ್ ಅನ್ನು ಒಬ್ಬರು ಮಾತ್ರ ಬಳಸುವುದು ಸಾಧ್ಯ.
ಬಹಳಷ್ಟು ಸಮಾಜಜಾಲಗಳಲ್ಲಿನ ಹ್ಯಾಂಡಲ್ ‘@’ ಚಿಹ್ನೆಯಿಂದ ಪ್ರಾರಂಭವಾಗುತ್ತದೆ. @ejnanadotcom ಎನ್ನುವುದು ಇಂತಹ ಹ್ಯಾಂಡಲ್‌ಗಳಿಗೊಂದು ಉದಾಹರಣೆ; ಇಜ್ಞಾನ ಡಾಟ್ ಕಾಮ್‌ನ ಟ್ವಿಟರ್ ಖಾತೆಯ ಹೆಸರು ಇದು. ಫೇಸ್‌ಬುಕ್ ಖಾತೆ ಹಾಗೂ ಪುಟಗಳನ್ನು ಗುರುತಿಸಲೂ ಇಂತಹವೇ ಹ್ಯಾಂಡಲ್‌ಗಳನ್ನು ಬಳಸಲಾಗುತ್ತದೆ. @ejnana ಎನ್ನುವುದು ಅಲ್ಲಿ ಇಜ್ಞಾನ ಪುಟದ ಹ್ಯಾಂಡಲ್.
ನಿಮ್ಮ ಸಂದೇಶಗಳಲ್ಲಿ ನಿರ್ದಿಷ್ಟ ಬಳಕೆದಾರ ಅಥವಾ ಪುಟದ ಪ್ರಸ್ತಾಪ ಮಾಡಲು ಅವರ ಹ್ಯಾಂಡಲ್ ಅನ್ನು ಬಳಸಬಹುದು. ‘@’ ಚಿಹ್ನೆಯಿಂದ ಪ್ರಾರಂಭವಾಗುವ ಹ್ಯಾಂಡಲ್ ಅನ್ನು ನಿಮ್ಮ ಸಂದೇಶದಲ್ಲಿ ಟೈಪ್ ಮಾಡುವ ಮೂಲಕ ನೀವು ಆ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದು ಸಾಧ್ಯ.

Handwriting recognition

ಹ್ಯಾಂಡ್‌ರೈಟಿಂಗ್ ರೆಕಗ್ನಿಶನ್
Kannada Equivalent: (ರೂಪಿಸಬೇಕಿದೆ)
Short Description : ಹಸ್ತಾಕ್ಷರವನ್ನು ಗುರುತಿಸುವ ತಂತ್ರಜ್ಞಾನ
Long Description: ಮುದ್ರಿತ ಅಕ್ಷರಗಳನ್ನು ಗುರುತಿಸಿ ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ಓಸಿಆರ್ ತಂತ್ರಜ್ಞಾನದಂತೆ ಹಸ್ತಾಕ್ಷರವನ್ನು ಗುರುತಿಸುವ ‘ಹ್ಯಾಂಡ್‌ರೈಟಿಂಗ್ ರೆಕಗ್ನಿಶನ್’ ತಂತ್ರಜ್ಞಾನವೂ ಇದೆ.
ಕೈಬರಹದ ಕಡತದ ಚಿತ್ರ – ಟಚ್‌ಸ್ಕ್ರೀನ್ ಮೇಲೆ ಬರೆದ ಪಠ್ಯವನ್ನೆಲ್ಲ ಪರಿಶೀಲಿಸಿ ಅದರಲ್ಲಿರುವ ಅಕ್ಷರಗಳನ್ನು ಗುರುತಿಸುವುದು, ಹಾಗೆ ಗುರುತಿಸಿದ್ದನ್ನು ಕಂಪ್ಯೂಟರಿಗೆ ಅರ್ಥವಾಗುವ ಭಾಷೆಗೆ ಬದಲಿಸುವುದು ಈ ತಂತ್ರಜ್ಞಾನದ ಕೆಲಸ.
ಹಸ್ತಾಕ್ಷರ ಗುರುತಿಸಲು ಎರಡು ಮಾರ್ಗಗಳನ್ನು ಅನುಸರಿಸುವುದು ಸಾಧ್ಯ. ಈ ಪೈಕಿ ಮೊದಲನೆಯದು ‘ಇಂಟೆಲಿಜೆಂಟ್ ಕ್ಯಾರೆಕ್ಟರ್ ರೆಕಗ್ನಿಶನ್’ (ಐಸಿಆರ್). ಈ ವಿಧಾನದಲ್ಲಿ ಬರಹದ ಪ್ರತಿ ಅಕ್ಷರವನ್ನೂ ಪ್ರತ್ಯೇಕವಾಗಿ ಗುರುತಿಸಲು ಪ್ರಯತ್ನಿಸಲಾಗುತ್ತದೆ. ಹಲವು ಅರ್ಜಿಗಳನ್ನು ತುಂಬುವಾಗ ಅಕ್ಷರಗಳನ್ನು ಚಿಕ್ಕಚಿಕ್ಕ ಚೌಕಗಳೊಳಗೆ ಪ್ರತ್ಯೇಕವಾಗಿ ಬರೆಯುತ್ತೇವಲ್ಲ, ಆ ಮಾದರಿಯ ಪಠ್ಯವನ್ನು ಪರಿಶೀಲಿಸಲು ಇದು ಸೂಕ್ತ ವಿಧಾನ. ಬರಹದ ಸ್ವರೂಪ ಗೊತ್ತಿದ್ದ ಸಂದರ್ಭದಲ್ಲೂ (ಉದಾ: ಪತ್ರದ ಪಿನ್‌ಕೋಡ್‌ನಲ್ಲಿ ಅಂಕಿಗಳಷ್ಟೇ ಇರುತ್ತದೆ) ಈ ವಿಧಾನವನ್ನು ಬಳಸಬಹುದು.
ಎರಡನೇ ವಿಧಾನ ‘ಇಂಟೆಲಿಜೆಂಟ್ ವರ್ಡ್ ರೆಕಗ್ನಿಶನ್’ (ಐಡಬ್ಲ್ಯೂಆರ್). ಇಲ್ಲಿ ಅಕ್ಷರಗಳ ಬದಲು ಪದಗಳನ್ನು ಪ್ರತ್ಯೇಕವಾಗಿ ಗುರುತಿಸುವ ಪ್ರಯತ್ನ ನಡೆಯುತ್ತದೆ. ಅರ್ಜಿ ನಮೂನೆಯಂತಹ ನಿರ್ಬಂಧಗಳೇನೂ ಇಲ್ಲದಾಗ ಉದ್ದಕ್ಕೆ ಬರೆದುಕೊಂಡು ಹೋಗುತ್ತೇವಲ್ಲ, ಅಂತಹ ಪಠ್ಯವನ್ನು ಡಿಜಿಟಲೀಕರಿಸಲು ಈ ವಿಧಾನವನ್ನು ಬಳಸಬಹುದು.
ಹಸ್ತಾಕ್ಷರವನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ತಂತ್ರಜ್ಞಾನ ಕನ್ನಡದಲ್ಲೂ ಇದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನುಗಳಿಗೆ ಲಭ್ಯವಿರುವ ‘ಗೂಗಲ್ ಹ್ಯಾಂಡ್‌ರೈಟಿಂಗ್ ಇನ್‌ಪುಟ್’ ಆಪ್ ಇಂತಹ ಸೌಲಭ್ಯಗಳಿಗೊಂದು ಉದಾಹರಣೆ.

Hamburger Icon

ಹ್ಯಾಂಬರ್ಗರ್ ಐಕನ್
Kannada Equivalent: (ರೂಪಿಸಬೇಕಿದೆ)
Short Description : ಮೊಬೈಲ್ ಆಪ್‌ಗಳಲ್ಲಿ, ಜಾಲತಾಣಗಳಲ್ಲಿ ಕಾಣಸಿಗುವ ಮೂರು ಅಡ್ಡಗೆರೆ ಅಥವಾ ಚುಕ್ಕಿಗಳ ಚಿತ್ರ (ಐಕನ್); ಇದನ್ನು ಕ್ಲಿಕ್ ಮಾಡಿದರೆ ಸಂಬಂಧಪಟ್ಟ ಮೆನು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ
Long Description: ಮೊಬೈಲ್ ಆಪ್ ಹಾಗೂ ಕೆಲವು ವೆಬ್‌ಸೈಟುಗಳಲ್ಲಿ ಪರದೆಯ ಒಂದು ಮೂಲೆಯಲ್ಲಿ ಮೂರು ಅಡ್ಡಗೆರೆಗಳ ಒಂದು ಚಿತ್ರ (ಐಕನ್) ಇರುವುದನ್ನು ನೀವು ನೋಡಿರಬಹುದು. ಇದರ ಹೆಸರೇ ‘ಹ್ಯಾಂಬರ್ಗರ್ ಐಕನ್.’
ಮೊಬೈಲಿನ ಪರದೆಯ ಮೇಲೆ ಲಭ್ಯವಿರುವ ಜಾಗ ಕಡಿಮೆಯಲ್ಲ, ಕಂಪ್ಯೂಟರ್ ಪರದೆಯಲ್ಲಿ ಮಾಡಿದಂತೆ ತಂತ್ರಾಂಶದ ನೂರೆಂಟು ಆಯ್ಕೆಗಳನ್ನೆಲ್ಲ (ಮೆನು) ಅಲ್ಲಿ ವಿವರವಾಗಿ ಪ್ರದರ್ಶಿಸುವುದು ಕಷ್ಟ. ಅಂತಹ ಆಯ್ಕೆಗಳನ್ನು ಹಿನ್ನೆಲೆಯಲ್ಲಿಟ್ಟು ಬಳಕೆದಾರ ಬೇಕೆಂದಾಗ ಮಾತ್ರ ಕಾಣಿಸುವಂತೆ ಮಾಡಲು ಈ ಐಕನ್ ಬಳಕೆಯಾಗುತ್ತದೆ. ಇದರಲ್ಲಿರುವ ಮೂರು ಅಡ್ಡಗೆರೆಗಳು ಬರ್ಗರ್ ರಚನೆಯನ್ನು ನೆನಪಿಸುವುದರಿಂದ ಅದಕ್ಕೆ ಹಾಗೆ ಹೆಸರು ಬಂದಿದೆ.
ಮೊಬೈಲುಗಳ ಮೂಲಕವೇ ಜನಪ್ರಿಯವಾದ ಈ ಐಕನ್ ಈಗ ಹಲವು ಜಾಲತಾಣಗಳ ಡೆಸ್ಕ್‌ಟಾಪ್ ಆವೃತ್ತಿಯಲ್ಲೂ ಕಾಣಿಸಿಕೊಳ್ಳುತ್ತಿದೆ, ಮೆನು ಬೇಕಿದ್ದರೆ ಈ ಚಿತ್ರವನ್ನು ಕ್ಲಿಕ್ ಮಾಡಬೇಕೆನ್ನುವುದು ಬಳಕೆದಾರರಿಗೂ ಪರಿಚಯವಾಗುತ್ತಿದೆ.

Hacker

ಹ್ಯಾಕರ್
Kannada Equivalent: (ರೂಪಿಸಬೇಕಿದೆ)
Short Description : ಬೇರೊಬ್ಬರ ಕಂಪ್ಯೂಟರ್ ವ್ಯವಸ್ಥೆಯನ್ನು ಪ್ರವೇಶಿಸಿ ಅಲ್ಲಿರುವ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುವ ವ್ಯಕ್ತಿ
Long Description: ಬೇರೊಬ್ಬರ ಕಂಪ್ಯೂಟರ್ ವ್ಯವಸ್ಥೆಯನ್ನು ಪ್ರವೇಶಿಸಿ ಅಲ್ಲಿರುವ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುವ ಪ್ರಕ್ರಿಯೆಯನ್ನು ಹ್ಯಾಕಿಂಗ್ ಎಂದು ಗುರುತಿಸಲಾಗುತ್ತದೆ. ಇದರಲ್ಲಿ ತೊಡಗಿದವರನ್ನು ಹ್ಯಾಕರ್‌ಗಳೆಂದು ಕರೆಯುವುದು ಸಾಮಾನ್ಯ ಅಭ್ಯಾಸ.
ಹ್ಯಾಕರ್‌ಗಳ ಉದ್ದೇಶ ಅನೇಕ ಬಗೆಯದಾಗಿರುವುದು ಸಾಧ್ಯ. ಹ್ಯಾಕರುಗಳ ಪೈಕಿ ಅನೇಕರು ಇತರರ ಮಾಹಿತಿಯನ್ನು ಕದ್ದು ಅದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬಾಹ್ಯ ಜಗತ್ತು ವಿಲನ್‌ಗಳಂತೆ ನೋಡುವುದು ಇಂತಹವರನ್ನೇ. ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಇವರ ಕೆಲಸ ಶಿಕ್ಷಾರ್ಹ ಅಪರಾಧವೆನಿಸಿಕೊಳ್ಳುತ್ತದೆ.
ಆದರೆ ಎಲ್ಲ ಹ್ಯಾಕರ್‌ಗಳೂ ಖಳನಾಯಕರೇ ಆಗಬೇಕೆಂದಿಲ್ಲ. ಕಂಪ್ಯೂಟರ್ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಪರೀಕ್ಷಿಸಿ ಅವುಗಳ ಸುರಕ್ಷತೆಯಲ್ಲಿರಬಹುದಾದ ದೋಷಗಳನ್ನು ಗುರುತಿಸುವ ಹ್ಯಾಕರ್‌ಗಳೂ ಇದ್ದಾರೆ. ತಮ್ಮ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಬಯಸುವ ಸಂಸ್ಥೆಗಳಿಗೆ ಈ ಬಗೆಯ ಹ್ಯಾಕರುಗಳಿಂದ ಮಹತ್ವದ ನೆರವು ದೊರಕುತ್ತದೆ. ದುರುದ್ದೇಶಪೂರಿತ ವ್ಯಕ್ತಿಗಳು ನಮ್ಮ ವ್ಯವಸ್ಥೆಯನ್ನು ಹಾಳುಗೆಡವಲು ಏನೇನೆಲ್ಲ ಮಾಡಬಹುದು ಎಂದು ಊಹಿಸಿ, ಅವರ ಕುತಂತ್ರಗಳು ಸಫಲವಾಗದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಇಂತಹ ಹ್ಯಾಕರುಗಳ ನೆರವಿನಿಂದ ಸಾಧ್ಯವಾಗುತ್ತದೆ.
ಅಂದಹಾಗೆ ಹ್ಯಾಕಿಂಗ್‌ನ ಸ್ವರೂಪ ಮೂಲತಃ ಹೀಗಿರಲಿಲ್ಲವಂತೆ. ೧೯೬೦ರ ದಶಕದಲ್ಲಿ ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಹ್ಯಾಕಿಂಗ್ ಕಲ್ಪನೆ ಜನ್ಮತಳೆದ ಸಂದರ್ಭದಲ್ಲಿ ಚಿತ್ರವಿಚಿತ್ರ ತಂತ್ರಾಂಶಗಳನ್ನು ಬರೆಯುವವರು, ಕುಚೋದ್ಯಕ್ಕಾಗಿ ಪ್ರಾಕ್ಟಿಕಲ್ ಜೋಕ್ ಮಾಡುವವರು, ಏನೇನೋ ಸಾಹಸಮಾಡುವವರನ್ನೆಲ್ಲ ಹ್ಯಾಕರ್‌ಗಳೆಂದು ಕರೆಯಲಾಗುತ್ತಿತ್ತು. ಕಂಪ್ಯೂಟರುಗಳ ಸುರಕ್ಷತಾ ವ್ಯವಸ್ಥೆಯನ್ನು ಭೇದಿಸಿ ಅದರಲ್ಲಿನ ಹುಳುಕುಗಳನ್ನು ತೋರಿಸಿಕೊಡುವುದೂ ಅಂದಿನ ಹ್ಯಾಕರ್‌ಗಳ ಹವ್ಯಾಸಗಳಲ್ಲೊಂದಾಗಿತ್ತು ಎಂದು ಇತಿಹಾಸ ಹೇಳುತ್ತದೆ.

Haptics

ಹ್ಯಾಪ್ಟಿಕ್ಸ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರ್ – ಸ್ಮಾರ್ಟ್‌ಫೋನ್‌ಗಳ ಜೊತೆಗಿನ ನಮ್ಮ ಒಡನಾಟಕ್ಕೆ ಸ್ಪರ್ಶದ ಅನುಭವವನ್ನೂ ಸೇರಿಸುವ ತಂತ್ರಜ್ಞಾನ
Long Description: ಕಂಪ್ಯೂಟರ್ – ಸ್ಮಾರ್ಟ್‌ಫೋನ್‌ಗಳನ್ನೆಲ್ಲ ಬಳಸುವಾಗ ನಮ್ಮ ಅನುಭವವೆಲ್ಲ ನೋಡುವುದಕ್ಕೆ ಹಾಗೂ ಕೇಳುವುದಕ್ಕಷ್ಟೇ ಸೀಮಿತವಾಗಿರುವುದು ಸಾಮಾನ್ಯ. ನೋಡುವ – ಕೇಳುವ ಅನುಭವದ ಜೊತೆಗೆ ಈ ಒಡನಾಟಕ್ಕೆ ಸ್ಪರ್ಶದ ಅನುಭವವನ್ನೂ ಸೇರಿಸುವುದು ‘ಹ್ಯಾಪ್ಟಿಕ್ಸ್’ನ ಹೆಚ್ಚುಗಾರಿಕೆ. ಛಾಯಾವಾಸ್ತವದ (ವರ್ಚುಯಲ್ ರಿಯಾಲಿಟಿ) ಜಗತ್ತಿಗೆ ಇದು ಸ್ಪರ್ಶದ ಹೊಸ ಆಯಾಮವನ್ನು ಸೇರಿಸುತ್ತದೆ.
ಕಂಪ್ಯೂಟರಿನಲ್ಲಿ ಟೈಪಿಸುವಾಗ ಅದರ ಕೀಲಿಗಳು ನಮ್ಮ ಸ್ಪರ್ಶಕ್ಕೆ ಸ್ಪಂದಿಸುವುದು ನಮ್ಮ ಅನುಭವಕ್ಕೆ ಬರುತ್ತದೆ. ಅದೇ ಮೊಬೈಲ್ ಟಚ್‌ಸ್ಕ್ರೀನ್ ಮೇಲಿನ ಕೀಲಿಮಣೆಯಾದರೆ ಅದರಲ್ಲಿನ ಕೀಲಿಗಳು ನೋಡಲು ಎಷ್ಟೇ ಸಹಜವಾಗಿ ಕಂಡರೂ ಅವುಗಳನ್ನು ಸ್ಪರ್ಶಿಸುವ ಅನುಭವ ಮಾತ್ರ ಸಿಗುವುದಿಲ್ಲ. ಪರದೆಯ ಮೇಲಿನ ಕೀಲಿಯನ್ನು ಸ್ಪರ್ಶಿಸಿದಾಗ ಮೊಬೈಲು ಸಣ್ಣದಾಗಿ ಕಂಪಿಸುವಂತೆ ಮಾಡಿ ಸ್ಪರ್ಶದ ಅನುಭವವನ್ನೂ ನೀಡುವುದು ಹ್ಯಾಪ್ಟಿಕ್ಸ್‌ನಿಂದಾಗಿ ಸಾಧ್ಯವಾಗುತ್ತದೆ.
ಮೊಬೈಲಿನಲ್ಲಷ್ಟೇ ಅಲ್ಲ, ಕಂಪ್ಯೂಟರ್ ಆಟಗಳಲ್ಲಿ ಬಳಕೆಯಾಗುವ ಜಾಯ್‌ಸ್ಟಿಕ್‌ನಂತಹ ಸಾಧನಗಳಲ್ಲೂ ಸ್ಪರ್ಶದ ಅನುಭವ ನೀಡಬಹುದು; ಅಂದರೆ, ಕಾರ್ ರೇಸ್ ಆಟದಲ್ಲಿ ನಿಮ್ಮ ಕಾರು ಹಳ್ಳಕೊಳ್ಳಗಳಿಗೆ ಇಳಿದಾಗ – ರೋಡ್ ಹಂಪ್ ಮೇಲೆ ಹಾದುಹೋದಾಗ ಜಾಯ್‌ಸ್ಟಿಕ್ ಅಲುಗಾಡುವಂತೆ ಮಾಡುವುದು ಹ್ಯಾಪ್ಟಿಕ್ಸ್ ಸಹಾಯದಿಂದ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಟಚ್‌ಸ್ಕ್ರೀನ್ ಪರದೆಯ ಮೇಲೆ ಕಾಣುವ ಚಿತ್ರವನ್ನು ಮುಟ್ಟಿದರೆ ಅದರಲ್ಲಿರುವ ವಸ್ತುಗಳನ್ನು ಮುಟ್ಟಿದ ಅನುಭವವೇ ಆಗುವಂತೆಯೂ ಇದು ಮಾಡಬಲ್ಲದು. ಈ ಪರಿಕಲ್ಪನೆಯನ್ನು ‘ವರ್ಚುಯಲ್ ಟಚ್’ ಎಂದು ಕರೆಯುತ್ತಾರೆ.

Hashtag

ಹ್ಯಾಶ್‌ಟ್ಯಾಗ್
Kannada Equivalent: (ರೂಪಿಸಬೇಕಿದೆ)
Short Description : ಹ್ಯಾಶ್ (#) ಸಂಕೇತದಿಂದ ಪ್ರಾರಂಭವಾಗುವ ಯಾವುದೇ ಪದ ಅಥವಾ ಪದಗುಚ್ಛ; ಸಮಾಜಜಾಲಗಳಲ್ಲಿ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಬರಹಗಳನ್ನು ಒಟ್ಟಿಗೆ ಗುರುತಿಸಲು ಇವು ಬಳಕೆಯಾಗುತ್ತವೆ.
Long Description: ಟ್ವಿಟ್ಟರ್, ಫೇಸ್‌ಬುಕ್ ಮುಂತಾದ ಸಮಾಜಜಾಲಗಳಲ್ಲಿ ನಾವು ದಿನವೂ ನೋಡುವ ಅನೇಕ ಸಂದೇಶಗಳಲ್ಲಿ ಹ್ಯಾಶ್ (#) ಚಿಹ್ನೆಯಿಂದ ಪ್ರಾರಂಭವಾಗುವ ಪದಗಳನ್ನು ಬಳಸಲಾಗಿರುತ್ತದೆ. ಇಂತಹ ಪದಗಳನ್ನು ‘ಹ್ಯಾಶ್‌ಟ್ಯಾಗ್’ಗಳೆಂದು ಕರೆಯುತ್ತಾರೆ.
ಸಂದೇಶ ಬರೆಯುವವರ ಭಾವನೆಯನ್ನು ಪ್ರತಿನಿಧಿಸುವುದರಿಂದ ಪ್ರಾರಂಭಿಸಿ ಸಂಸ್ಥೆಗಳ ಹೆಸರನ್ನೋ ಭಾಷೆಯ ವಿಷಯವನ್ನೋ ನಿರ್ದಿಷ್ಟ ಘಟನೆಯನ್ನೋ ನಿರ್ದೇಶಿಸುವವರೆಗೆ ಹ್ಯಾಶ್‌ಟ್ಯಾಗ್‌ಗಳು ಅನೇಕ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಬೆಂಗಳೂರಿಗೆ ಸಂಬಂಧಪಟ್ಟ ವಿಷಯವೆಂದು ಹೇಳಲು #Bengaluru, ಕನ್ನಡದ ಮಾಹಿತಿ ಎನ್ನುವುದಕ್ಕೆ #Kannada – ಹೀಗೆ ಯಾವುದೇ ಬಗೆಯ ಹ್ಯಾಶ್‌ಟ್ಯಾಗ್‌ಗಳನ್ನು ನಾವೇ ಸ್ವತಃ ರೂಪಿಸಿಕೊಳ್ಳಬಹುದು, ಅಥವಾ ಈಗಾಗಲೇ ಇರುವ ಟ್ಯಾಗ್‌ಗಳನ್ನು ನಮ್ಮ ಸಂದೇಶಗಳಲ್ಲಿ ಬಳಸಲೂಬಹುದು.
ಇಂತಹ ಯಾವುದೇ ಹ್ಯಾಶ್‌ಟ್ಯಾಗ್ ಬಳಸಿರುವ ಎಲ್ಲ ಸಂದೇಶಗಳನ್ನೂ ಸಮಾಜ ಜಾಲಗಳು ಪ್ರತ್ಯೇಕವಾಗಿ ವರ್ಗೀಕರಿಸುತ್ತವೆ. ಹಾಗಾಗಿ ನಿರ್ದಿಷ್ಟ ಹ್ಯಾಶ್‌ಟ್ಯಾಗ್ ಬಳಸಿರುವ ಸಂದೇಶಗಳನ್ನು ಒಟ್ಟಾಗಿ ನೋಡುವುದು, ಹಾಗೂ ಅದನ್ನು ಎಷ್ಟು ಮಂದಿ ಬಳಸಿದ್ದಾರೆ ಎನ್ನುವುದರ ಆಧಾರದ ಮೇಲೆ ಆ ವಿಷಯದ ಜನಪ್ರಿಯತೆಯನ್ನು ಅರಿಯುವುದು ಕೂಡ ಸಾಧ್ಯವಾಗುತ್ತದೆ. ನಿರ್ದಿಷ್ಟ ವಿಷಯದ ಕುರಿತು ಹಂಚಿಕೊಳ್ಳಲಾಗಿರುವ ಮಾಹಿತಿ ಅಥವಾ ಸಂದೇಶಗಳನ್ನು ಹುಡುಕುವುದಕ್ಕೂ ಹ್ಯಾಶ್‌ಟ್ಯಾಗ್‌ಗಳು ಸಹಕಾರಿ.
ಹ್ಯಾಶ್‌ಟ್ಯಾಗ್‌ನಲ್ಲಿ ಒಂದೇ ಪದ ಇರಬೇಕು, ಪ್ರಾರಂಭ ‘#’ನೊಡನೆ ಆಗಿರಬೇಕು ಎನ್ನುವುದು ನಿಯಮ. ಹ್ಯಾಶ್‌ಟ್ಯಾಗ್‌ನಲ್ಲಿ ಅಕ್ಷರ, ಅಂಕಿ ಹಾಗೂ ಅಂಡರ್‌ಸ್ಕೋರ್(‘_’)ಗಳನ್ನು ಮಾತ್ರ ಬಳಸಬಹುದು. ಇತರ ಲೇಖನಚಿಹ್ನೆಗಳಿಗಾಗಲೀ ಖಾಲಿಜಾಗಗಳಿಗಾಗಲೀ (ಸ್ಪೇಸ್) ಹ್ಯಾಶ್‌ಟ್ಯಾಗ್‌ನಲ್ಲಿ ಜಾಗವಿಲ್ಲ.

3D Printing

೩ಡಿ ಪ್ರಿಂಟಿಂಗ್
Kannada Equivalent: (ರೂಪಿಸಬೇಕಿದೆ)
Short Description : ಮೂರು ಆಯಾಮದ ವಸ್ತುಗಳ ಮುದ್ರಣವನ್ನು ಸಾಧ್ಯವಾಗಿಸುವ ತಂತ್ರಜ್ಞಾನ
Long Description: ಕಂಪ್ಯೂಟರಿಗೊಂದು ಪ್ರಿಂಟರ್ ಜೋಡಿಸಿ ಬೇಕಾದ ಕಡತವನ್ನು ಕಾಗದದ ಮೇಲೆ ಮುದ್ರಿಸಿಕೊಳ್ಳುವುದು ನಮಗೆಲ್ಲ ಗೊತ್ತು. ಇಲ್ಲಿ ನಮ್ಮ ಕೈಗೆ ಬರುವ ಮುದ್ರಿತ ಪ್ರತಿ (ಪ್ರಿಂಟ್-ಔಟ್) ಎರಡು ಆಯಾಮದ್ದು. ಇದೇ ರೀತಿಯಲ್ಲಿ ಮೂರು ಆಯಾಮದ ಪ್ರಿಂಟ್-ಔಟ್‌ಗಳನ್ನೂ ಪಡೆಯಲು ಸಾಧ್ಯವಾಗಿಸುವ ತಂತ್ರಜ್ಞಾನವೇ ೩ಡಿ ಪ್ರಿಂಟಿಂಗ್.
ಇಲ್ಲಿ ಪಠ್ಯವನ್ನೋ ಚಿತ್ರವನ್ನೋ ಮುದ್ರಿಸಿಕೊಳ್ಳುವ ಬದಲಿಗೆ ನಮಗೇನು ಬೇಕೋ ಅದನ್ನೇ ತಯಾರಿಸಿಕೊಂಡುಬಿಡುವುದು ಸಾಧ್ಯ. ರಿಮೋಟ್ ಕಂಟ್ರೋಲಿನ ಮುರಿದುಹೋಗಿರುವ ಭಾಗವಾದರೂ ಸರಿ, ಬಿರುಕುಬಿಟ್ಟಿರುವ ಮೊಬೈಲ್ ಕವಚವಾದರೂ ಸರಿ; ಅದರ ವಿನ್ಯಾಸದ ವಿವರಗಳನ್ನು ಸೂಕ್ತ ತಂತ್ರಾಂಶದ ಮೂಲಕ ೩ಡಿ ಮುದ್ರಣಯಂತ್ರಕ್ಕೆ ಒಪ್ಪಿಸಿದರೆ ಸಾಕು, ಅದು ಹೊಸ ಭಾಗವನ್ನು ಸೃಷ್ಟಿಸಿಕೊಟ್ಟುಬಿಡುತ್ತದೆ.
ಕಾಗದದ ಮೇಲೆ ಮುದ್ರಿಸುವ ಮುದ್ರಣಯಂತ್ರ ಬಣ್ಣದ ಇಂಕು ಬಳಸಿದಂತೆ ಬಹುತೇಕ ೩ಡಿ ಪ್ರಿಂಟರುಗಳಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತದೆ; ಬಣ್ಣದ ಹನಿಗಳು ಕಾಗದದ ಮೇಲೆ ಅಕ್ಷರ-ಚಿತ್ರಗಳನ್ನು ರೂಪಿಸಿದ ಹಾಗೆ ಪ್ಲಾಸ್ಟಿಕ್ಕಿನ ಹನಿಗಳು ೩ಡಿ ಪ್ರಿಂಟರಿನ ಮೂಲಕ ಹೊರಬಂದು ಜೋಡಣೆಯಾಗಿ ನಮಗೆ ಬೇಕಾದ ವಸ್ತುವನ್ನು ಮೂರು ಆಯಾಮಗಳಲ್ಲಿ ರೂಪಿಸಿಕೊಡುತ್ತವೆ.
ಕಾಗದದ ಮೇಲೆ ಮುದ್ರಿಸುವ ಯಂತ್ರದಲ್ಲಿ ಬಣ್ಣವನ್ನು ಹೊರಸೂಸುವ ಭಾಗ ಕಾಗದದ ಮೇಲೆ ಒಂದೇ ನೇರದಲ್ಲಿ ಚಲಿಸುವಂತಿದ್ದರೆ ಸಾಕು. ಆದರೆ ೩ಡಿ ಪ್ರಿಂಟಿಂಗಿನಲ್ಲಿ ಹಾಗಲ್ಲ – ಪ್ಲಾಸ್ಟಿಕ್ಕನ್ನು ಹೊರಸೂಸುವ ಭಾಗ ಎಡಕ್ಕೂ ಬಲಕ್ಕೂ ಚಲಿಸುವ ಜೊತೆಗೆ ಮೇಲಕ್ಕೂ ಕೆಳಕ್ಕೂ ಚಲಿಸುತ್ತದೆ (ನಮಗೆ ಬೇಕಾದ ವಸ್ತು ಒಂದು ಫಲಕದ ಮೇಲೆ ರೂಪುಗೊಳ್ಳುತ್ತದಲ್ಲ, ಆ ಫಲಕವೂ ತಿರುಗುತ್ತದೆ). ಹಾಗಾಗಿಯೇ ಪ್ಲಾಸ್ಟಿಕ್ ಪದರಗಳು ಮೂರು ಆಯಾಮಗಳ ಆಕೃತಿಯಾಗಿ ರೂಪುಗೊಳ್ಳುವುದು ಸಾಧ್ಯವಾಗುತ್ತದೆ.

404 Not Found

೪೦೪ ನಾಟ್ ಫೌಂಡ್
Kannada Equivalent: (ರೂಪಿಸಬೇಕಿದೆ)
Short Description : ವಿಶ್ವವ್ಯಾಪಿ ಜಾಲದಲ್ಲಿ ನಾವು ತೆರೆಯಲು ಬಯಸಿದ ವೆಬ್ ಪುಟ ಅಥವಾ ಕಡತವನ್ನು ತೆರೆಯುವುದು ಸಾಧ್ಯವಾಗದಿದ್ದಾಗ ಕಾಣಿಸಿಕೊಳ್ಳುವ ದೋಷ (ಎರರ್)
Long Description: ಕಂಪ್ಯೂಟರನ್ನು, ಮೊಬೈಲ್ ಫೋನನ್ನು ಬಳಸುವಾಗ ನಾವು ಆಗಿಂದಾಗ್ಗೆ ಹಲವು ದೋಷಗಳನ್ನು (ಎರರ್) ಎದುರಿಸಬೇಕಾಗಿ ಬರುವುದುಂಟು. ತಂತ್ರಾಂಶ – ಯಂತ್ರಾಂಶಗಳಲ್ಲಿನ ಯಾವುದೇ ವೈಫಲ್ಯ ಅಥವಾ ಅವನ್ನು ಬಳಸುವಲ್ಲಿ ನಮ್ಮದೇ ತಪ್ಪು ಇಂತಹ ದೋಷಗಳಿಗೆ ಕಾರಣವಾಗಬಹುದು.
ಕೆಲ ಬಾರಿ ದೋಷಗಳ ಪರಿಣಾಮವಷ್ಟೇ (ಕಂಪ್ಯೂಟರ್ ಕೆಲಸಮಾಡದಿರುವುದು, ಆಪ್ ತೆರೆದುಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು, ಹೀಗೆ) ನಮ್ಮ ಗಮನಕ್ಕೆ ಬರುತ್ತದೆ, ನಿಜ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಅವು ಸಂದೇಶದ ರೂಪದಲ್ಲಿ ನಮ್ಮೆದುರು ಕಾಣಿಸಿಕೊಳ್ಳುತ್ತವೆ. ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ಕಾಣಸಿಗುವ ‘೪೦೪’, ಇಂತಹ ದೋಷಗಳಲ್ಲೊಂದು.
ನಾವು ತೆರೆಯಲು ಬಯಸಿದ ಯಾವುದೇ ವೆಬ್ ಪುಟ ಅಥವಾ ಕಡತವನ್ನು ತೆರೆಯುವುದು ಸಾಧ್ಯವಾಗದಿದ್ದಾಗ ಈ ದೋಷ ಉಂಟಾಗುತ್ತದೆ. ತಾಣದ ವಿಳಾಸ ಬದಲಾದಾಗ, ನಾವು ಅದನ್ನು ತಪ್ಪಾಗಿ ಟೈಪ್ ಮಾಡಿದಾಗ, ನಿರ್ದಿಷ್ಟ ಪುಟ/ಕಡತವನ್ನು ಆ ತಾಣದಿಂದ ತೆಗೆದುಹಾಕಿದಾಗ – ಹೀಗೆ ಈ ದೋಷಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಇಂತಹ ಪ್ರತಿಯೊಂದು ಸನ್ನಿವೇಶದಲ್ಲೂ ಸಂಬಂಧಪಟ್ಟ ಜಾಲತಾಣ ‘೪೦೪ ನಾಟ್ ಫೌಂಡ್’ ಎನ್ನುವ ಸಂದೇಶವನ್ನು ತೋರಿಸುವುದರಿಂದ ಇದರ ಹೆಸರು ಮಾತ್ರ ಬಳಕೆದಾರರ ನೆನಪಿನಲ್ಲಿ ಭದ್ರವಾಗಿ ಉಳಿದುಕೊಂಡುಬಿಟ್ಟಿದೆ!
ಅಂದಹಾಗೆ ನಿರ್ದಿಷ್ಟ ದೋಷಗಳು ಸಂಭವಿಸಿದಾಗ ಅವನ್ನು ಪ್ರತ್ಯೇಕ ಸಂಖ್ಯೆಗಳ (ಸ್ಟೇಟಸ್ ಕೋಡ್) ಮೂಲಕ ಗುರುತಿಸುವುದು ಕಂಪ್ಯೂಟರ್ ಜಗತ್ತಿನ ಸಾಮಾನ್ಯ ಅಭ್ಯಾಸ. ಬಹುತೇಕ ಸನ್ನಿವೇಶಗಳಲ್ಲಿ ಈ ಸಂಖ್ಯೆಯ ಪರಿಚಯ ತಂತ್ರಜ್ಞರಿಗಷ್ಟೇ ಇರುತ್ತದೆ; ಅದನ್ನು ಮೀರಿ ಸಾಮಾನ್ಯ ಬಳಕೆದಾರರಿಗೂ ಪರಿಚಿತವಾಗಿರುವುದು ಈ ೪೦೪ರ ಹೆಚ್ಚುಗಾರಿಕೆ. ಇದರ ಜನಪ್ರಿಯತೆ ಎಷ್ಟರಮಟ್ಟಿನದು ಎಂದರೆ ಏನು ಮಾಡಬೇಕೆಂದು ತೋಚದೆ ಪೆದ್ದುಪೆದ್ದಾಗಿ ಆಡುವವರನ್ನು (‘ಕ್ಲೂಲೆಸ್’) ೪೦೪ ಎಂದು ಗುರುತಿಸುವ ಅಭ್ಯಾಸವೂ ಇದೆ!

Outbox

ಔಟ್‌ಬಾಕ್ಸ್
Kannada Equivalent: (ರೂಪಿಸಬೇಕಿದೆ)
Short Description : ನಾವು ಕಳಿಸುವ ಇಮೇಲ್ ಸಂದೇಶಗಳು ವಿಳಾಸದಾರರಿಗೆ ರವಾನೆಯಾಗುವವರೆಗೂ ಉಳಿದುಕೊಳ್ಳುವ ಫೋಲ್ಡರಿಗೆ ಔಟ್‌ಬಾಕ್ಸ್ ಎಂದು ಹೆಸರು.
Long Description: ಕಾಗದದ ಕಡತಗಳನ್ನು ನಿಭಾಯಿಸುವ ಕಚೇರಿಗಳಲ್ಲಿ ಒಳಬರುವ ಕಡತಗಳನ್ನು, ಹೊರಹೋಗುವ ಕಡತಗಳನ್ನು ಪ್ರತ್ಯೇಕವಾಗಿಟ್ಟುಕೊಳ್ಳುವ ಅಭ್ಯಾಸವಿದೆ. ಹೊಸದಾಗಿ ಪರಿಶೀಲನೆಗೆ ಬಂದ ಕಡತಗಳನ್ನು ‘ಇನ್ ಟ್ರೇ’ಯಲ್ಲೂ ಪರಿಶೀಲನೆಯ ನಂತರ ಮುಂದಿನ ಕ್ರಮಕ್ಕೆ ಕಳುಹಿಸಬೇಕಾದವನ್ನು ‘ಔಟ್ ಟ್ರೇ’ಯಲ್ಲೂ ಇಡುವುದು ಇದನ್ನು ಸಾಧಿಸುವ ಕ್ರಮಗಳಲ್ಲೊಂದು.
ಕಾಗದದ ಕಡತಗಳಿಗಿಂತ ಸಂಪೂರ್ಣ ಭಿನ್ನವಾದ ಇಮೇಲ್ ವ್ಯವಸ್ಥೆಯಲ್ಲೂ ಇಂತಹುದೇ ಒಂದು ಪರಿಕಲ್ಪನೆಯಿದೆ. ನಮಗೆ ಬಂದ ಇಮೇಲ್ ಸಂದೇಶಗಳನ್ನು, ನಾವು ಕಳುಹಿಸುತ್ತಿರುವ ಸಂದೇಶಗಳನ್ನು ಪ್ರತ್ಯೇಕವಾಗಿಡುವುದು ಈ ಪರಿಕಲ್ಪನೆಯ ಉದ್ದೇಶ. ಇದಕ್ಕಾಗಿ ನಮ್ಮ ಇಮೇಲ್ ಖಾತೆಯಲ್ಲಿ ಪ್ರತ್ಯೇಕ ಫೋಲ್ಡರುಗಳನ್ನು ಬಳಸಲಾಗುತ್ತದೆ, ಕಚೇರಿಯಲ್ಲಿ ಬೇರೆಬೇರೆ ಕಾಗದಗಳನ್ನು ಬೇರೆಬೇರೆ ಫೈಲುಗಳಲ್ಲಿ ಇಡುವಂತೆಯೇ!
ಈ ಪೈಕಿ ನಮಗೆ ಬಂದ ಸಂದೇಶಗಳು ‘ಇನ್‌ಬಾಕ್ಸ್’ನಲ್ಲಿರುತ್ತವೆ. ಇಮೇಲ್ ಖಾತೆಗೆ ಲಾಗಿನ್ ಆದಾಗ ಮೊದಲಿಗೆ ಇದೇ ಫೋಲ್ಡರ್ ಕಾಣಿಸಿಕೊಳ್ಳುವುದು ಸಾಮಾನ್ಯ. ನಾವು ಇಮೇಲ್‌ಗಳನ್ನು ಕಳಿಸುತ್ತೇವಲ್ಲ, ಅವು ವಿಳಾಸದಾರರಿಗೆ ರವಾನೆಯಾಗುವವರೆಗೂ ಉಳಿದುಕೊಳ್ಳುವ ಫೋಲ್ಡರಿಗೆ ‘ಔಟ್‌ಬಾಕ್ಸ್’ ಎಂದು ಹೆಸರು. ಬಹಳಷ್ಟು ಸಂದರ್ಭಗಳಲ್ಲಿ ಇಮೇಲ್‌ಗಳು ಥಟ್ಟನೆ ರವಾನೆಯಾಗುವುದರಿಂದ ಇದು ನಮ್ಮ ಗಮನಕ್ಕೆ ಬರುವುದೇ ಅಪರೂಪ – ಅಂತರಜಾಲ ಸಂಪರ್ಕ ಇಲ್ಲದಾಗ, ವೇಗ ಕಡಿಮೆಯಿದ್ದಾಗ ಅಥವಾ ದೊಡ್ಡ ಅಟ್ಯಾಚ್‌ಮೆಂಟ್ ಜೊತೆಗೆ ಇಮೇಲ್ ಕಳಿಸಿದರಷ್ಟೇ ಅದು ಈ ಫೋಲ್ಡರಿನ ಮೂಲಕ ಹಾದುಹೋಗುವುದನ್ನು ನೋಡಬಹುದು. ರವಾನೆಯಾದ ಸಂದೇಶಗಳ ಒಂದು ಪ್ರತಿ ‘ಸೆಂಟ್ ಮೆಸೇಜಸ್’ ಎಂಬ ಫೋಲ್ಡರಿನಲ್ಲಿ ಉಳಿದುಕೊಂಡಿರುತ್ತದೆ.

Image Compression

ಇಮೇಜ್ ಕಂಪ್ರೆಶನ್
Kannada Equivalent: (ರೂಪಿಸಬೇಕಿದೆ)
Short Description : ಚಿತ್ರರೂಪದ ಕಡತಗಳ ಗಾತ್ರವನ್ನು ಕುಗ್ಗಿಸಲು ಬಳಕೆಯಾಗುವ ತಂತ್ರ
Long Description: ಡಿಜಿಟಲ್ ರೂಪದಲ್ಲಿರುವ ಯಾವುದೇ ಚಿತ್ರ ದೊಡ್ಡ ಸಂಖ್ಯೆಯ ಪಿಕ್ಸೆಲ್‌ಗಳು ಸೇರಿ ರೂಪುಗೊಂಡಿರುತ್ತದೆ. ಚಿತ್ರದ ಗುಣಮಟ್ಟ ಹೆಚ್ಚಿರಬೇಕು ಎಂದರೆ ಅದರಲ್ಲಿರುವ ಪಿಕ್ಸೆಲ್‌ಗಳ ಸಂಖ್ಯೆಯೂ ಜಾಸ್ತಿಯಾಗಬೇಕು. ಹಾಗಾದಾಗ ಮೆಮೊರಿಯಲ್ಲಿ ಚಿತ್ರವನ್ನು ಉಳಿಸಿಡಲು ಬೇಕಾದ ಸ್ಥಳಾವಕಾಶವೂ ಜಾಸ್ತಿಯಾಗುತ್ತದೆ.
ಇದನ್ನು ತಪ್ಪಿಸಲೆಂದೇ ಚಿತ್ರಗಳನ್ನು ಉಳಿಸಿಡುವಾಗ ಅದರಲ್ಲಿರುವ ಮಾಹಿತಿಯನ್ನು ಸಾಧ್ಯವಾದಷ್ಟೂ ಕುಗ್ಗಿಸಲಾಗುತ್ತದೆ: ಬಹುಭಾಗದಲ್ಲಿ ಒಂದೇ ಬಣ್ಣವಿರುವ ಚಿತ್ರವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಅದಷ್ಟೂ ಭಾಗದಲ್ಲಿರುವ ಬಣ್ಣ ಯಾವುದು ಎಂಬ ಮಾಹಿತಿಯನ್ನು ಪ್ರತಿಯೊಂದು ಪಿಕ್ಸೆಲ್‌ಗೂ ಪ್ರತ್ಯೇಕವಾಗಿ ಉಳಿಸಿಡುವ ಅಗತ್ಯವಿಲ್ಲವಲ್ಲ! ಈ ಪ್ರಕ್ರಿಯೆಯ ಹೆಸರೇ ಇಮೇಜ್ ಕಂಪ್ರೆಶನ್.
ಹೀಗೆ ಕುಗ್ಗಿಸುವಾಗ ಚಿತ್ರದಲ್ಲಿರುವ ಮಾಹಿತಿಯ ಕೆಲವುಭಾಗ ಕಳೆದುಹೋದರೆ, ಅಂದರೆ ಲಾಸ್ ಆದರೆ, ಅದು ‘ಲಾಸಿ’ ಕಂಪ್ರೆಶನ್; ಎಲ್ಲ ಮಾಹಿತಿಯನ್ನೂ ಉಳಿಸಿಕೊಂಡೇ ಚಿತ್ರವನ್ನು ಕುಗ್ಗಿಸುವುದಾದರೆ ಅದರಲ್ಲಿ ಏನೂ ಲಾಸ್ ಇಲ್ಲವಲ್ಲ, ಹಾಗಾಗಿ ಅದು ‘ಲಾಸ್‌ಲೆಸ್’ ಕಂಪ್ರೆಶನ್.
ಡಿಜಿಟಲ್ ಚಿತ್ರಗಳ ವಿಷಯಕ್ಕೆ ಬಂದಾಗ ‘ಜೆಪಿಜಿ’ (ಅಥವಾ ‘ಜೆಪೆಗ್’), ‘ಪಿಎನ್‌ಜಿ’ ಇತ್ಯಾದಿಗಳೆಲ್ಲ ನಮಗೆ ಪರಿಚಿತವಾದ ಹೆಸರುಗಳು. ಚಿತ್ರಗಳ ಗಾತ್ರವನ್ನು ಕುಗ್ಗಿಸಲು ‘ಜಾಯಿಂಟ್ ಫೋಟೋಗ್ರಾಫಿಕ್ ಎಕ್ಸ್‌ಪರ್ಟ್ಸ್ ಗ್ರೂಪ್’ ಎಂಬ ಸಂಸ್ಥೆ ರೂಪಿಸಿದ ವಿಧಾನವೇ ಜೆಪಿಜಿ ಅಥವಾ ‘ಜೆಪೆಗ್’. ಇದು ಲಾಸಿ ಕಂಪ್ರೆಶನ್ ತಂತ್ರಕ್ಕೊಂದು ಉದಾಹರಣೆ. ‘ಪೋರ್ಟಬಲ್ ನೆಟ್‌ವರ್ಕ್ ಗ್ರಾಫಿಕ್ಸ್’ ಎಂಬ ಹೆಸರಿನ ಹ್ರಸ್ವರೂಪವಾದ ಪಿಎನ್‌ಜಿ ವಿಧಾನದಲ್ಲಿ ಚಿತ್ರಗಳ ಗಾತ್ರವನ್ನು ಲಾಸ್‌ಲೆಸ್ ಕಂಪ್ರೆಶನ್ ಮೂಲಕ ಕುಗ್ಗಿಸಲಾಗುತ್ತದೆ.

ICT

ಐಸಿಟಿ
Kannada Equivalent: ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ
Short Description : ಇನ್‌ಫರ್ಮೇಶನ್ ಆಂಡ್ ಕಮ್ಯೂನಿಕೇಶನ್ ಟೆಕ್ನಾಲಜಿ ಎಂಬ ಹೆಸರಿನ ಹ್ರಸ್ವರೂಪ
Long Description: ಇನ್‌ಫರ್ಮೇಶನ್ ಟೆಕ್ನಾಲಜಿ, ಅರ್ಥಾತ್ ಮಾಹಿತಿ ತಂತ್ರಜ್ಞಾನ ಎನ್ನುವುದು ನಮಗೆಲ್ಲ ಚಿರಪರಿಚಿತ ಹೆಸರು. ದತ್ತಾಂಶದ (ಡೇಟಾ) ಸೃಷ್ಟಿ, ಸಂಸ್ಕರಣೆ, ಶೇಖರಣೆ ಹಾಗೂ ವಿನಿಮಯದಂತಹ ಪ್ರಕ್ರಿಯೆಗಳಲ್ಲಿ ಕಂಪ್ಯೂಟರ್ ಹಾಗೂ ಅದಕ್ಕೆ ಸಂಬಂಧಿಸಿದ ಸಾಧನ-ವ್ಯವಸ್ಥೆಗಳ ಬಳಕೆಯನ್ನು ಈ ಹೆಸರು ಪ್ರತಿನಿಧಿಸುತ್ತದೆ. ಐಟಿ ಎನ್ನುವುದು ಇದೇ ಹೆಸರಿನ ಹ್ರಸ್ವರೂಪ.
ಸಂವಹನ ಮಾಧ್ಯಮಗಳನ್ನು ಪೂರಕವಾಗಿ ಬಳಸುವುದರಿಂದ ಈ ಕ್ಷೇತ್ರ ಇನ್ನೂ ಹೆಚ್ಚು ಪರಿಣಾಮಕಾರಿಯಾಗುವುದು ಸಾಧ್ಯ. ಈ ಉದ್ದೇಶದಿಂದ ರೂಪುಗೊಂಡಿರುವುದೇ ಐಸಿಟಿ ಪರಿಕಲ್ಪನೆ. ಐಸಿಟಿ ಎನ್ನುವುದು ಇನ್‌ಫರ್ಮೇಶನ್ ಆಂಡ್ ಕಮ್ಯೂನಿಕೇಶನ್ ಟೆಕ್ನಾಲಜಿ, ಅರ್ಥಾತ್ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಎಂಬ ಹೆಸರಿನ ಹ್ರಸ್ವರೂಪ.

ಐಟಿಯಲ್ಲಿ ಬಳಕೆಯಾಗುವ ಕಂಪ್ಯೂಟರ್ ಮತ್ತಿತರ ಸಾಧನಗಳ ಜೊತೆಗೆ ಐಸಿಟಿ ಪರಿಕಲ್ಪನೆಯಲ್ಲಿ ದೂರವಾಣಿ, ಅಂತರಜಾಲ, ಉಪಗ್ರಹ ತಂತ್ರಜ್ಞಾನ ಮುಂತಾದ ಸಂಗತಿಗಳೂ ಸೇರುತ್ತವೆ. ಇನ್ಸ್‌ಟೆಂಟ್ ಮೆಸೇಜಿಂಗ್, ವೀಡಿಯೋ ಕಾನ್ಫರೆನ್ಸಿಂಗ್, ಸೋಶಿಯಲ್ ನೆಟ್‌ವರ್ಕಿಂಗ್, ಆನ್‌ಲೈನ್ ಗೇಮಿಂಗ್‌ಗಳೆಲ್ಲ ಸಾಧ್ಯವಾಗುವುದು ಇವೆಲ್ಲ ಒಟ್ಟಿಗೆ ಸೇರಿದಾಗಲೇ.
ಇಷ್ಟೆಲ್ಲ ಸವಲತ್ತುಗಳನ್ನು ಒಟ್ಟಾಗಿ ಬಳಸುವ ಮೂಲಕ ಕ್ರೀಡೆಯಿಂದ ಮನರಂಜನೆಯವರೆಗೆ, ಶಿಕ್ಷಣದಿಂದ ಸಂಶೋಧನೆಯವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಸಾಧ್ಯತೆಗಳನ್ನು ರೂಪಿಸಿಕೊಳ್ಳಬಹುದು ಎನ್ನುವುದು ಐಸಿಟಿಯ ಆಶಯ.

Search Dictionaries

Loading Results

Follow Us :   
  Download Bharatavani App
  Bharatavani Windows App