भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಈಕ್ವಟೋರಿಯಲ್ ಟೆಲಿಸ್ಕೋಪ್

(ಖ) ಭೂ ಅಕ್ಷಕ್ಕೆ ಸಮಾಂತರವಾದ ಅಕ್ಷದ ಮೇಲೆ, ವಿಷುವದ್ ವೃತ್ತಕ್ಕೆ ಲಂಬವಾಗಿ ಎರಡೂ ದಿಕ್ಕುಗಳಲ್ಲಿ ಸುತ್ತುವಂತೆ ಅಳವಡಿಸಿರುವ, ಈ ದಿಕ್ಕುಗಳನ್ನು ಓದಲು ಸಾಧ್ಯ ಮಾಡಿ ಕೊಡುವಂಥ ಅಳತೆ ಪಟ್ಟಿಗಳು ಇರುವ, ದೂರದರ್ಶಕ. ಇದರಿಂದ ಉದ್ದಿಷ್ಟ ನಕ್ಷತ್ರವನ್ನು ದೀರ್ಘಕಾಲ ಯಾವುದೇ ತಿದ್ದುಪಾಟಿಲ್ಲದೆ ವೀಕ್ಷಿಸ ಬಹುದು. ವಿಷುವದ್ದೂರದರ್ಶಕ

ಈಗ್ರೆಟ್

(ಪ್ರಾ) ಸಿಕೋನೈಯಿಫಾರ್ಮೀಸ್ ಗಣದ ಆರ್ಡಯಿಡೀ ಕುಟುಂಬಕ್ಕೆ ಸೇರಿದ ಹಲವಾರು ಜಾತಿ ಹಕ್ಕಿಗಳ ಸಾಮಾನ್ಯ ಹೆಸರು ಬೆಳ್ಳಕ್ಕಿ. ಅಚ್ಚ ಬಿಳಿ ಬಣ್ಣದ ಹಕ್ಕಿಗಳಿವು. ಸಂತಾನ ವೃದ್ಧಿಯ ಕಾಲದಲ್ಲಿ ಕೆಲವು ಗರಿಗಳು ಉದ್ದವಾಗುತ್ತವೆ

ಈಜುರೆಕ್ಕೆ

(ಪ್ರಾ) ಈಜಲು, ಸಮತೋಲ ಏರ್ಪಡಿಸಿಕೊಳ್ಳಲು ಮತ್ತು ದಿಕ್ಕು ಬದಲಿಸಲು ಅನುಕೂಲಿಸುವಂತೆ ಮೀನು ಮತ್ತಿತರ ಜಲಚರ ಪ್ರಾಣಿಗಳ ಒಡಲಿನ ವಿವಿಧ ಭಾಗಗಳಲ್ಲಿ ಬೆಳೆದಿರುವ ತೆಳು ಚಪ್ಪಟೆಯಾದ ಅಂಗಭಾಗವೇ ಈಜುರೆಕ್ಕೆ

ಈಟಿಗಾಳ

(ತಂ) ಮೀನು, ತಿಮಿಂಗಿಲ ಮುಂತಾದ ಜಲಚರಗಳ ಬೇಟೆಗೆ ಪೂರ್ವಶಿಲಾಯುಗದ ಮ್ಯಾಗ್ಡಲೀನಿಯನ್ ಸಂಸ್ಕೃತಿಯಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದ ಹಗ್ಗ ಕಟ್ಟಿದ ಈಟಿಯಂಥ ಎಸೆಸಾಧನ. ಪ್ರಾಣಿಗಳ ಮೂಳೆ ಅಥವಾ ಜಿಂಕೆಯ ಕೊಂಬಿನಿಂದ ಮಾಡಿದುದು. ಭಾರತದಲ್ಲಿ ಕ್ರಿಪೂ ೨ನೆಯ ಸಹಸ್ರಮಾನದ ಅಂತ್ಯದಲ್ಲಿ ಗಂಗಾನದೀ ಬಯಲಿನ ತಾಮ್ರ ಯುಗೀನ ಸಂಸ್ಕೃತಿಯಲ್ಲಿ ಕಂಡುಬರುತ್ತದೆ. ಹಾರ್ಪೂನ್

ಈಡುಗಾರ ಮೀನು

(ಪ್ರಾ) ಪರ್ಸಿಫಾರ್ಮೀಸ್ ಗಣ, ಟಾಕ್ಸೂಟಿಡೀ ಕುಟುಂಬಕ್ಕೆ ಸೇರಿದ ಸಿಹಿನೀರ ಮೀನು. ಕೀಟಗಳನ್ನು ಸೆರೆಹಿಡಿಯಲು ಇದು ಬಾಯಿ ಯಿಂದ ನೀರಿನ ಧಾರೆಯನ್ನು ಅಂಬಿನಂತೆ ಚಿಮ್ಮಿಸುತ್ತದೆ. ಇಂತಹ ಮೀನು ಇಂಡೋನೇಷ್ಯದಲ್ಲಿ ಕಂಡುಬರುತ್ತದೆ. ಬಿಲ್ಲು ಮೀನು

ಈಥರ್

(ರ) C2H5.O.C2H5 ಎರಡು ಹೈಡ್ರೊಕಾರ್ಬನ್ ಗುಂಪುಗಳು ಒಂದು ಆಕ್ಸಿಜನ್ ಪರಮಾಣುವಿನೊಂದಿಗೆ R-O-R| ಎಂಬ ಸಾಮಾನ್ಯ ಸೂತ್ರಕ್ಕನುಗುಣವಾಗಿ ರಚನೆಗೊಂಡ ಆರ್ಗ್ಯಾನಿಕ್ ಸಂಯುಕ್ತ ವಸ್ತು. ಮಧುರ ವಾಸನೆಯ ನಿರ್ವರ್ಣ ದ್ರವ. ಅರಿವಳಿಕೆಯಾಗಿ ಬಳಕೆ (ಭೌ) ವಿದ್ಯುತ್ಕಾಂತ ವಿಕಿರಣ ಸಾಗಣೆಗೆ ಅವಶ್ಯವೆಂದು ಒಮ್ಮೆ ಭಾವಿಸಲಾಗಿದ್ದ ಮಾಧ್ಯಮ. ನಿರಪೇಕ್ಷ ವ್ಯೋಮ ದಲ್ಲಿ (ಸ್ಪೇಸ್) ಈಥರ್ ವಿಶ್ರಾಂತಸ್ಥಿತಿಯಲ್ಲಿರುತ್ತದೆಂಬ ನಂಬಿಕೆ ಅನವಶ್ಯವೆಂದು ವಿಶೇಷ ಸಾಪೇಕ್ಷತಾ ಸಿದ್ಧಾಂತ ಸ್ಥಾಪಿಸಿತು (೧೯೦೫)

ಈಥೇನ್

(ರ) C2H6. ವರ್ಣ ಮತ್ತು ವಾಸನೆಯಿಲ್ಲದ ಅನಿಲ ರೂಪದ ಹೈಡ್ರೊಕಾರ್ಬನ್. ನೀರಿನಲ್ಲಿ ಅವಿಲೇಯ. ಆಲ್ಕೇನ್ ಶ್ರೇಣಿಯ ದ್ವಿತೀಯ ಸದಸ್ಯ. ಕುಬಿಂ -೮೮0ಸೆ. ದ್ರಬಿಂ -೧೮೩0ಸೆ. ನೈಸರ್ಗಿಕ ಅನಿಲದಲ್ಲಿ ದೊರೆಯುತ್ತದೆ. ತೆಳುವರ್ಣದ ಜ್ವಾಲೆ ಯೊಂದಿಗೆ ಉರಿಯುತ್ತದೆ

ಈಥೈಲ್

(ರ) C2H5- ರ‍್ಯಾಡಿಕಲ್ ಇರುವಿಕೆಯ ಸೂಚಕ ನಾಮ

ಈಥೈಲ್ ಆಲ್ಕಹಾಲ್

(ರ) C2H5OH. ಮದ್ಯ ತಯಾರಿಕೆಯಲ್ಲಿ ಬಳಕೆಯಾಗುವ ಸಂಯುಕ್ತ. ಇದನ್ನು ಅಪ್ಪಟ ಆಲ್ಕಹಾಲ್ ಎಂದು ಕರೆಯಲಾಗುತ್ತದೆ. ಶೇ. ೪.೩ ನೀರು ಇರುವ ಆಲ್ಕಹಾಲನ್ನು ಆಸವಿತ ಆಲ್ಕಹಾಲ್ ಎಂದು ಕರೆಯುತ್ತಾರೆ

ಈಪಾಕ್ಸಿ ರಾಳಗಳು

(ರ) ಉಷ್ಣಭದ್ರ ರಾಳಗಳು. ಬಿಸ್‌ಫಿನಾಲ್‌ನಂಥ ಪಾಲಿಹೈಡ್ರಿಕ್ ಸಂಯುಕ್ತಗಳು ಎಪಿ ಕ್ಲೋರೋ ಹೈಡ್ರಿನ್‌ನೊಂದಿಗೆ ಕ್ರಿಯಾವರ್ಧಕದ ಸಮ್ಮುಖದಲ್ಲಿ ವರ್ತಿಸಿದಾಗ ದೊರೆಯುವ ರಾಳಗಳು ವಿದ್ಯುದುಪಕರಣಗಳಲ್ಲಿ ಬಳಕೆ

ಈಮ್ಯೂ ಹಕ್ಕಿ

(ಪ್ರಾ) ಕಾಜ್ಯುಯರಿಫಾರ್ಮೀಸ್ ಗಣ, ಡ್ರಾಮಿಸಿಯೈಡೀ ಕುಟುಂಬ ಹಾಗೂ ಡ್ರೊಮೇಯಸ್ ಜಾತಿಗೆ ಸೇರಿದ, ಉಷ್ಟ್ರಪಕ್ಷಿಯನ್ನು ಹೋಲುವ, ಆಸ್ಟ್ರೇಲಿಯದ ಪಕ್ಷಿ. ಹಾರಲಾಗದ ಆದರೆ ವೇಗವಾಗಿ ಓಡಬಲ್ಲ ಪಕ್ಷಿ. ಎತ್ತರದ ಅಡಚಣೆಗಳನ್ನು ನೆಗೆದು ದಾಟಬಲ್ಲದು. ಸಮರ್ಥವಾಗಿ ಈಜ ಬಲ್ಲದು. ಇದರ ಅಂದವಾದ ಗರಿಗಳು ಅಲಂಕರಣವಾಗಿ ಬಳಕೆ

ಈಯುವುದು

(ವೈ) ಜರಾಯುಜ ಪ್ರಾಣಿಗಳು ಮರಿಹಾಕುವ ಕ್ರಿಯೆ. ಹೆರಿಗೆ, ಪ್ರಸೂತಿ

ಈರುಳ್ಳಿ

(ಸ) ಲಿಲಿಯೇಸೀ ಕುಟುಂಬದ ಅಲ್ಲಿಯಮ್ ಜಾತಿಯ ದ್ವೈವಾರ್ಷಿಕ ಪೊದೆ ಸಸ್ಯ. ಅಲ್ಲಿಯಮ್ ಸೀಪ ವೈಜ್ಞಾನಿಕ ನಾಮ. ಸುಮಾರು ೩೦೦ ಪ್ರಭೇದಗಳು ಉಂಟು. ಅನಾದಿಕಾಲದಿಂದ ಬಳಕೆಯಲ್ಲಿ ಇರುವ ಮುಖ್ಯ ತರಕಾರಿಗಳಲ್ಲಿ ಒಂದು. ಗೆಡ್ಡೆ ಹಾಗೂ ಕಾವುಗಳು ತರಕಾರಿ ಯಾಗಿ ಬಳಕೆ. ಅಲೈಲ್ ಪ್ರೊಪೈಲ್ ಡೈ ಸಲ್ಫೈಡ್ ರಾಸಾಯನಿಕವೂ ಆವಿಶೀಲ ತೈಲವೂ ಇರುವುದರಿಂದ ರುಚಿಯಲ್ಲಿ ಖಾರವಾಗಿರುತ್ತದೆ. ರುಚಿಕರ ಪುಷ್ಟಿಕರ ಆಹಾರ, ರಂಜಕ ಹಾಗೂ ‘ಸಿ’ ವೈಟಮಿನ್‌ಗಳಿವೆ. ಔಷಧೀಯ ಗುಣಗಳೂ ಉಂಟು. ಹೆಚ್ಚು ಕಾಲ ಕೆಡದೆ ಇರುವ ಜನಪ್ರಿಯ ತರಕಾರಿ. ವಾಣಿಜ್ಯ ಪ್ರಾಮುಖ್ಯವೂ ಉಂಟು. ಉಳ್ಳಾಗೆಡ್ಡೆ, ನೀರುಳ್ಳಿ

ಈಸ್ಟ್ರೊಜೆನ್

(ಪ್ರಾ) ಸ್ತನಿಗಳಲ್ಲಿ ಸ್ತ್ರೀಯರ ಮದಚಕ್ರ ಮತ್ತಿತರ ಲೈಂಗಿಕ ಪ್ರತಿಕ್ರಿಯೆಗಳ ಮೇಲೆ ಪರಿಣಾಮ ಬೀರುವ ಲೈಂಗಿಕ ಹಾರ್ಮೋನ್. ಅಂಡಾಶಯದಲ್ಲಿ ಪ್ರಧಾನವಾಗಿ ಉತ್ಪತ್ತಿ. ಸ್ತ್ರೀ ಜನನಾಂಗಗಳ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ಬಳಕೆ

ಈಸ್ಟ್ರೋನ್

(ಪ್ರಾ) ಮನುಷ್ಯರಲ್ಲಿ ಸ್ವಾಭಾವಿಕವಾಗಿ ಉತ್ಪತ್ತಿ ಯಾಗುವ ಮೂರು ಬೆದೆಜನಕ ಹಾರ್ಮೋನ್‌ಗಳಲ್ಲಿ ಒಂದು. ಉಳಿದೆರಡು: ಈಸ್ಟ್ರಡಿಯೋಲ್ ಮತ್ತು ಈಸ್ಟ್ರಿಯಾಲ್. ಸ್ತ್ರೀ ಜನನೇಂದ್ರಿಯ ಹಾಗೂ ಅಡ್ರಿನಲ್ ಕಾರ್ಟೆಕ್ಸ್‌ಗಳಲ್ಲಿ ಉತ್ಪತ್ತಿ ಯಾಗುವ ಇದೊಂದು ಸ್ಟೀರಾಯ್ಡ್ ಚೋದಕ. ರಾಸಾಯನಿಕವಾಗಿ ಸ್ಟೀರಾಯ್ಡ್ ಬಳಗದ ಒಂದು ಕೀಟೋನ್. C18H22O2 ಇದನ್ನು ಈಸ್ಟ್ರೊಜನ್ ಎಂದೂ ಕರೆಯುವುದುಂಟು

Search Dictionaries

Loading Results

Follow Us :   
  Download Bharatavani App
  Bharatavani Windows App